ಜಾತಿ ಜನಗಣತಿ ಮತ್ತು ಬ್ಯಾರಿ ಕಂಫ್ಯುಶನ್






ವಿಷಯ ಏನಪ್ಪಾ ಅಂದ್ರೆ ... 
ಕರ್ನಾಟಕದ  ಸಾಮಾಜಿಕ, ಜಾತಿ ಹಾಗೂ ಶೈಕ್ಷಣಿಕ ಗಣತಿ-೨೦೧೫ ಆರಂಭ ವಾಗಿದೆಯಂತೆ.ಕರ್ನಾಟಕ ಸರಕಾರವು ರಾಜ್ಯ ಮಟ್ಟದಲ್ಲಿ ಸಾರ್ವತ್ರಿಕ ಸಮೀಕ್ಷೆಯೊಂದನ್ನು ನಡೆಸಲು ತೀರ್ಮಾನಿಸಿದೆಯಂತೆ. ಈ ಸಮೀಕ್ಷೆ ಎಪ್ರಿಲ್ 11 ರಂದು ಆರಂಭವಾಗಿ ಎಪ್ರಿಲ್ 30 ರಂದು ಮುಗಿಯಲಿದೆಯಂತೆ . ನಮ್ಮ ದೇಶದಲ್ಲಿ 1931 ರ ಬಳಿಕ ಇಂತಹ ಸಮೀಕ್ಷೆಯೊಂದು ನಡೆಯುತ್ತಿರುವುದು ಇದೇ ಮೊದಲ ಬಾರಿಯಂತೆ. ಸಮೀಕ್ಷೆಗಾಗಿ ನಿಯುಕ್ತ ಅಧಿಕಾರಿಗಳು 55 ಪ್ರಶ್ನೆಗಳಿರುವ ಒಂದು ಪ್ರಶ್ನಾವಳಿಯೊಂದಿಗೆ ಪ್ರತಿಯೊಬ್ಬರ ಮನೆಗೆ ಭೇಟಿ ನೀಡಲಿದ್ದಾರಂತೆ.

ಎಲ್ಲಿ ನೋಡಿದರೂ ಇದೇ ಮೆಸೇಜ್. ಸುನಾಮಿ ಅಲೆಗಳಂತೆ ಅಪ್ಪಳಿಸುತ್ತಿರುವ ಮೆಸೇಜ್ ನೋಡಿ ಒಂದು ತರ ಗೊಂದಲಕ್ಕೆ ಒಳಗಾದ ಜನತೆ ಯಾವ ಕಾಲಂ ನಲ್ಲಿ ಏನು ಬರೆಯಬೇಕೆಂಬ ಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ. ಇನ್ನೊಂದು  ಕಡೆ ನಾಯಕರೆನಿಸಿಕೊಂಡವರು ಹೀಗೆಯೇ ಬರೆಯಬೇಕೆಂಬ ಫರ್ಮಾನು ಹೊರಡಿಸಿದ್ದಾರಂತೆ. ಮೆಸೇಜ್ ಗಳ ಅಪ್ಪಳಿಸುವಿಕೆಯಿಂದ ತಲೆ ಚಿಟ್ಟಾಗಿ ಹೋಗಿದೆ. ಹಾಗೆ ಬರೆಯಿರಿ, ಹೀಗೆ ಬರೆಯಿರಿ, ಈ ನಂಬರ್ ಹಾಕಿ ಆ ನಂಬರ್ ಹಾಕಬೇಡಿ. ಇಲ್ಲಾಂದ್ರೆ ನಮ್ಮ ಅಸ್ತಿತ್ವಕ್ಕೆ ದಕ್ಕೆ . ಅಯ್ಯಾಪ್ಪಾ ಒಂದೋ ಎರಡೋ ........

ಒಂದು ಫ್ಲಾಶ್ ಬ್ಯಾಕ್ ಹೇಳ್ತೇನೆ ಕೇಳಿ..
ನನ್ನ ಶಾಲಾ ದಿನಗಳಲ್ಲಿ  ಸಾಧಾರಣವಾಗಿ   ಆಗುತ್ತಿದ್ದ ತಂಟೆ ಜಗಳಗಳ ನಡುವೆ "ಏ ಬ್ಯಾರಿ " ಎಂದು ಯಾರದ್ರೂ ಅಂದ್ರೆ ಪಿತ್ತ ನೆತ್ತಿಗೇರಿ ಜಗಳಕ್ಕೆ ರಣರಂಗ ಸಿದ್ದವಾಗುತಿತ್ತು.ನನ್ನಂತ ಸಣಕಲರು ಬರುವ ಕೋಪವನ್ನು  ಹಲ್ಲು ಕಚ್ಚಿ ಸುಮ್ಮನಿದ್ದರೆ, ಬಲಾಡ್ಯ ರಂತೂ ಬ್ಯಾರಿ ಎಂಬ ಪದದಿಂದ ಆದ ಅವಮಾನದಿಂದ ತತ್ತರಿಸಿ, ಹೇಳಿದವನಿಗೆ ನಾಲ್ಕು ಬಡಿಯದೇ ನಿದ್ದೆ ಮಾಡಿದ ಚರಿತ್ರೆ ನನ್ನ ನೆನಪಿನಲ್ಲಿಯೇ ಇಲ್ಲ. ಕೊನೆಗೆ ಹೆಡ್ ಮೇಸ್ಟ್ರ ನಾಗರಬೆತ್ತದ ಪೆಟ್ಟಿನ ರುಚಿಯೊಂದಿಗೆ ಯುದ್ದ ಅಂತ್ಯವಾಗುತಿತ್ತು.

ನಾನು ಪದವಿಯ ಮೊದಲ ವರ್ಷ ಕಲಿಯುತ್ತಿದ್ದಾಗ ಮಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ನಡೆದ ಬ್ಯಾರಿ ಸಮ್ಮೇಳನ ದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತ್ತಿತ್ತು.ಆಗ ನನ್ನ ಮೆಚ್ಚಿ ನ ಸಾಹಿತಿಗಳಾಗಿದ್ದ ಬಿ.ಎಂ.ಇದ್ದಿನಬ್ಬರು ಅಧ್ಯಕ್ಷ ರಾಗಿದ್ದರು. ನಕ್ಕ್  ನಿಕ್ಕ್ , ಮಲಾಮೆ, ಉರ್ದು  ಮಾತನಾಡುತಿದ್ದ ಕೆಲವು ಹಿರಿಯರು ಮತ್ತು  ಸಾಹಿತಿಗಳಾದ ಬೊಳುವಾರ್, ಕಟ್ಪಾಡಿಯವರು ಕೂಡ ವೇದಿಕೆಯಲ್ಲಿದ್ದನ್ನು ನೋಡಿ ಬ್ಯಾರಿಗಳಿಗೆ ಸಾಮಾಜಿಕ ಮಾನ್ಯತೆ ಸಿಕ್ಕಿದ ಖುಷಿಯಲ್ಲಿ ಹಿರಿ ಹಿರಿ ಹಿಗ್ಗಿದ್ದೆ. ಬ್ಯಾರಿ ಎಂಬ ಪದದ ಕೀಳರಿಮೆಯಿಂದ ಬಳಲುತಿದ್ದ ನನ್ನಂತ ಕೆಲವು ಬ್ಯಾರಿಗಳು ಆ ಹೊತ್ತು ನಿಟ್ಟುಸಿರು ಬಿಟ್ಟದ್ದು ಅವರ ಮುಖಗಳಲ್ಲಿ ಆಗ ಎದ್ದು ಕಾಣುತಿತ್ತು . ತದ ನಂತರ  ನಡೆದ ಎರಡು ಬ್ಯಾರಿ ಸಮ್ಮೇಳನದಲ್ಲೂ ನಾನು ಭಾಗವಹಿಸಿದ್ದೆ .  ಬ್ಯಾರಿ ಎಂದರೆ ಖುಷಿಯಾಗುವ ಮಟ್ಟಕ್ಕೆ ಬೆಳೆದು ನಿಂತಾಗ ನಮ್ಮೊಳಗಿನ ಕೀಳರಿಮೆ ಮಂಜಿನಂತೆ ಕರಗಿ ಹೋಗಿತ್ತು .

ಸುಮಾರು ಎಂಬತ್ತು ವಯಸ್ಸಿನ ಆಸುಪಾಸು ಬದುಕಿದ್ದ ನನ್ನ ಅಜ್ಜಂದಿರಿಬ್ಬರು ಕೂಡ  ಬ್ಯಾರಿ ಎಂಬ ಪದನಾಮವನ್ನು ಹೊತ್ತುಕೊಂಡೇ ಬದುಕಿದವರು.ಒಬ್ಬರು ಮಲಾಮೆ ಮಾತನಾಡುತ್ತಿದ್ದರೆ ಇನ್ನೊಬ್ಬರು ನಕ್ನಿಕ್ ಮಾತನಾಡುತ್ತಿದ್ದರು.ಅನ್ಯ ಸಮುದಾಯದ ನಡುವೆ ಬ್ಯಾರಿಗಳೆಂದು ಗುರುತಿಸಲ್ಪಟ್ಟವರು.ಇಂದು ಅವರಿಬ್ಬರೂ ಇಲ್ಲವಾದರೂ ಅವರು ಉಳಿಸಿ ಹೋದ ಮಲಮೆ,ನಕ್ನಿಕ್  ಭಾಷೆ ಮತ್ತು ಬ್ಯಾರಿ ಸಂಸ್ಕ್ರತಿ ಇಂದೂ ನಮ್ಮೊಂದಿಗೆ ಇದೆ . ಆಧುನಿಕತೆ ತೆರೆದುಕೊಂಡತೆಲ್ಲ ಬ್ಯಾರಿ ಎಂಬ ಪದನಾಮ ಮಾಯವಾಯಿತು .

ಇನ್ನು ವಿಷಯಕ್ಕೆ ಬರೋಣ..  
ಭಾರತೀಯ ಮುಸ್ಲಿಮರ ಪುರೋಗತಿಯ ದ್ರಷ್ಟಿ ಯಿಂದ  ಹತ್ತಾರು  ವರದಿಗಳು, ಸಮೀಕ್ಷೆಗಳು, ಗಣತಿಗಳು ನಡೆಯಿತಾದರೂ ಹೇಳ ತಕ್ಕಂಥ ಯಾವ ಅಭಿವ್ರದ್ದಿಯ ಉದ್ದೇಶಗಳನ್ನು ಈ ವರೆಗೆ ಸಾಧಿಸಲು ಆಗಿಲ್ಲ ಎಂಬುದು ಸೂರ್ಯ ಬೆಳಕಿನಷ್ಟೇ ಸತ್ಯ. ಮಂಡಲ್ ಆಯೋಗದ ವರದಿ ,ಸಾಚಾರ್ ವರದಿಯಲ್ಲಿ ಮುಸ್ಲಿಮರ ಸ್ತಿತಿ ಗತಿಗಳ ಬಗ್ಗೆ ಬೆಳಕು ಚೆಲ್ಲಾಲಾಯಿತಾದರೂ ರಾಜಕೀಯ ಮೇಲಾಟಗಳಿಂದಾಗಿ ಉದ್ದೇಶಿತ  ಕಾರ್ಯ ಪೂರ್ತಿಯಾಗಲೇ ಇಲ್ಲ . ಅರ್ಧಂಬರ್ಧ ಕಲಿತ ಬ್ಯಾರಿ ಮುಸ್ಲಿಮರು ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡು ತಮ್ಮ ಜೀವನವನ್ನು ಸಾಗಿಸುವ ಕಡೆಗೆ ಗಮನ ಕೊಟ್ಟು, ತಮ್ಮ ಅಸ್ತಿತ್ವನ್ನು ತಮ್ಮ ಪರಿಶ್ರಮ ದಿಂದ ಉಳಿಸಿಕೊಂಡರೇ ಹೊರತು ಸರಕಾರದ ವರದಿಗಳು ಸಮೀಕ್ಷೆಗಳು ಅವರ ಅಭಿವ್ರದ್ದಿಗೆ ಸಹಾಯಕವಾಗಲೇ ಇಲ್ಲ. ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರೆಂದು ಗುರುತಿಸಲ್ಪಟ್ಟ ಮುಸ್ಲಿಮರಲ್ಲಿ ಜಾತಿಯ ವ್ಯವಸ್ಥೆ ಇಲ್ಲ.ಹಾಗೆನೋಡಿದರೆ ಮುಸ್ಲಿಮರೊಳಗೆ ಹಣಕಾಸಿಗೆ ಸಂಭದಿಸಿದಂತೆ ಮೇಲುಕೀಲುಗಳು, ಹಿಂದಿನ ತಲೆಮಾರುಗಳಿಂದ ಮುಂದುವರಿದು ಬಂದಂತಹ  ಗೋತ್ರ ಗಳು ಇರಬಹುದೇ ಹೊರತು ಜಾತಿ ಆಧಾರಿತ ವ್ಯವಸ್ಥೆಗೆ ಇಲ್ಲ . ಮುಸ್ಲಿಮರಿಗೆ ಹಿಂದುಳಿದ ವರ್ಗದ ಮೀಸಲಾತಿ ನೀಡಬೇಕೆ ? ಜಾತಿ ಗುರುತಿಸಿ ಮೀಸಲಾತಿ ನೀಡಬೇಕೆ? ಎಂಬ ಗೊಂದಲ ಸರಕಾರೀ ವ್ಯವಸ್ಥೆ ಯೊಳಗಿದೆ.ಆದರೆ ಇಸ್ಲಾಂ ಧರ್ಮವು  ಜಾತಿ ಪದ್ಧತಿಯನ್ನು ಒಪ್ಪುವುದಿಲ್ಲ ಎಂಬುದನ್ನು ಕೂಡ ನಾವು ಗಮನಿಸಬೇಕಾಗಿದೆ.ಇಸ್ಲಾಂ ಧರ್ಮದ ಮೂಲ ಉದ್ದೇಶ ಮತ್ತು ಗುರಿ ಅದರ ಅನುಯಾಯಿಗಳನ್ನು ಏಕ ದೇವ ವಿಶ್ವಾಸ ಮತ್ತು ಸಮಾನತೆಯ ಆಧಾರದಲ್ಲಿ ಒಟ್ಟು ಗೂಡಿಸುವುದೇ  ಹೊರತು, ಇಸ್ಲಾಮಿಗೆ ಹೊರತಾದ ಜಾತಿ ವ್ಯವಸ್ಥೆ ಆಧಾರಿತ ವಿಂಗಡನೆಯಲ್ಲ. 

ಭಾರತದಲ್ಲಿ ಧರ್ಮಧಾರಿತವಾದ ಮೀಸಲಾತಿ ಇಲ್ಲದ ಕಾರಣದಿಂದ ಈವಾಗ ನಡೆಯುತ್ತಿರುವ ಸಾಮಾಜಿಕ, ಜಾತಿ ಹಾಗೂ ಶೈಕ್ಷಣಿಕ ಗಣತಿಯಲ್ಲಿ  ಯಾವ ಜಾತಿ ನಮೂದಿಸಿದರೆ ಸರಕಾರದ ಸಿಗುವ ಸವಲತ್ತುಗಳನ್ನು  ಮತ್ತು   ಅದನ್ನು ಮೀಸಲಾತಿಯ ಅವಕಾಶಗಳನ್ನು ಸಮರ್ಪಕ ವಾಗಿ ಬಳಸಬಹುದು ಎಂಬ ಉದ್ದೇಶದಿಂದ ಸಮುದಾಯದ ಕೆಲವು ನಾಯಕರಿಂದ ಅದರ ಮಾಹಿತಿಗಳನ್ನು ಮಾಧ್ಯಮಗಳ ಮೂಲಕ ತಿಳಿಸಲಾಯಿತು. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಬ್ಯಾರಿ ಸಮುದಾಯವನ್ನು ಅಭಿವ್ರದ್ದಿಯ ಕಡೆಗೆ ಮುಖ ಮಾಡಲು ಇದೊಂದು ಉತ್ತಮ ಅವಕಾಶವೆಂದು ಪರಿಗಣಿಸಿದ  ಬ್ಯಾರಿ ಮುಖಂಡರು ಬ್ಯಾರಿ ಸಮುದಾಯಕ್ಕೆ ಸಮರ್ಪಕ ಮಾಹಿತಿ ನೀಡುವಂತೆ ಸಲಹೆ ಸೂಚನೆಗಳನ್ನು ಕೊಟ್ಟರು.

ಗೊಂದಲಗಳ ಗೂಡಾಗಿರುವ ಈ ಗಣತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ  ಚರ್ಚೆಗಳು  ನಡೆಯ ತೊಡಗಿತು . ಫೇಸ್ ಬುಕ್ , ಟ್ವಿಟ್ಟರ್ , ವಾಟ್ಸ್ ಆಪ್ ಗಳಲ್ಲಿ  ದಿನಕ್ಕೆ ಹತ್ತಾರು  ಸಂದೇಶ ಬರತೊಡಗಿತು .  ಈಗಾಗಲೇ ಕರಾವಳಿಯ ಮುಸ್ಲಿಮರುನ್ನು ಅನ್ಯ ಸಮುದಾಯವು ನಮ್ಮ ಸಾಂಸ್ಕ್ರತಿಕ ವಿಬಿನ್ನತೆಯ ಕಾರಣದಿಂದ  ಬ್ಯಾರಿಗಳೆಂದು  ಗುರುತಿಸಿರುವುದರಿಂದ   ಆ ಬ್ಯಾರಿ ಯನ್ನೇ ಜಾತಿಯಾಗಿ ಪರಿಗಣಿಸಿ ಬರೆದರೆ ಸರಕಾರಕ್ಕೆ ನಮ್ಮನ್ನು ಗುರುತಿಸಲು ಸುಲಭವಾಗಬಹುದು ಎಂಬುದೇ ಹಿರಿಯ ನಾಯಕರ ಉದ್ದೇಶವಾಗಿತ್ತು ಎಂಬುದನ್ನು ನಾವು ಸೂಕ್ಸ್ಮವಾಗಿ ಗಮನಿಸಿದರೆ  ಅರ್ಥವಾಗುವುದು ಕಷ್ಟವೇನಲ್ಲ.

ಶಿಕ್ಷಣದಿಂದ ವಂಚಿತರಾದರೂ  ಕರಾವಳಿಯ ಕೆಲವು ಬ್ಯಾರಿಗಳು ವ್ಯಾಪಾರ ವಹಿವಾಟಿನ ಗಮನ ಕೊಟ್ಟರೆ, ಇನ್ನು ಕೆಲವರು ವಿದೇಶದ ಕಡೆಗೆ ಮುಖ ಮಾಡಿ ಆರ್ಥಿಕವಾಗಿ ಸಶಕ್ತರಾಗಲು ಪ್ರಯತ್ನ ಪಟ್ಟರುಸರ್ಕಾರದ ಸವಲತ್ತುಗಳಿಗೆ, ಮೀಸಲಾತಿಗಳಿಗೆ  ಕಾದು ಕೂರದೆ   ಸ್ವ ಪರಿಶ್ರಮದಿಂದ ಸ್ವಾಭಿಮಾನದ ಬದುಕು ಕಟ್ಟಿ ಕೊಂಡರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ . ಇವತ್ತು ಎಲ್ಲಾ  ರಂಗಗಳಲ್ಲಿ  ಬ್ಯಾರಿಗಳು ಮಿಂಚುತ್ತಿದ್ದರೂ ಸರಕಾರೀ ಇಲಾಖೆಗಳಲ್ಲಿ , ಉನ್ನತ ಮಟ್ಟದ ಉದ್ಯೋಗ, ಸ್ಥಾನಗಳಲ್ಲಿ ವಿರಳವಾಗಿ ಮಾತ್ರ ಕಾಣ ಸಿಗುತ್ತಾರೆ ಎಂಬುದು ದುರಂತ ಸತ್ಯ .

ಕೊನೆಯದಾಗಿ .....  
ಮುಸ್ಲಿಮರ ನಡುವೆ ಇರುವ ತತ್ವ ಸಿದ್ದಾಂತಗಳ ಬಿನಾಭಿಪ್ರಾಯದಿಂದ ಪಂಗಡಗಳು ಇರಬಹುದೇ ಹೊರತು ಅವು ಜಾತಿ ಎಂದು ಪರಿಗಣಿಸಲಾಗುವುದಿಲ್ಲ. ಅವು ಜಾತಿ ಎಂದು ಪರಿಗಣಿಸಲ್ಪಟ್ಟರೆ ಒಂದೇ ಮನೆಯಲ್ಲಿ ವಾಸಿಸುವ ರಕ್ತ ಸಂಭಂದಿಗಳು  ಬೇರೆ ಬೇರೆ ಸಿದ್ದಾಂತಗಳಿಂದಾಗಿ ಬೇರೆ ಬೇರೆ ಜಾತಿಗಳು ಎಂದು ನಮೂದಿಸಲ್ಪಟ್ಟರೆ ಅದಕ್ಕಿಂತ ದೊಡ್ಡ ಹಾಸ್ಯಾಸ್ಪದ ವಿಷಯ ಬೇರೆ ಇರಲಿಕ್ಕಿಲ್ಲ. ವ್ಯಕ್ತಿಯ ಸಿದ್ದಾಂತಗಳು ಯಾವಾಗ ಬೇಕಾದರೂ ಬದಲಾಗಬಹುದು ಆದರೆ ಅವನ ಸಮುದಾಯವನ್ನು  ಇತರ ಸಮಾಜವು  ಗುರುತಿಸಿದ ರೀತಿ ಪಕ್ಕನೆ ಬದಲಾಯಿಸಲು  ಖಂಡಿತಾ  ಸಾಧ್ಯವಿಲ್ಲ. 

ಆದುದರಿಂದ ಅಧ್ಯಯನ,ಅನುಭವ ಮತ್ತು ದೂರ ದ್ರಷ್ಟಿಯ ಕೊರತೆಯಿಂದ ನನಗಿಷ್ಟವಾದ ಸಿದ್ದಾಂತ ಆದಾರಿತ ಜಾತಿಯನ್ನು  ಬರೆಯುತ್ತೇನೆ ಎಂಬ ಮೊಂಡುವಾದ ಮಂಡಿಸಿದರೆ ನಮಗೆ  ನಷ್ಟವೇ  ಹೊರತು  ಸರಕಾರಕ್ಕೋ ಗಣತಿಯ ಅಧಿಕಾರಿಗಳಿಗೋ ಅಲ್ಲ ಎಂಬುದನ್ನು ನಾವು ಮನಗಾಣ ಬೇಕಾಗಿದೆ. ನಮ್ಮ ರಾಜ್ಯ ಯಾ ಕೇಂದ್ರ  ಸರಕಾರವು ಯಾವುದೇ ಗೊಂದಲಗಳಿಲ್ಲದೆ ನಮ್ಮನ್ನು   ಗುರುತಿಸಲು  ಬ್ಯಾರಿ ಎಂದು ಬರೆಯಲು ನಾನು ತೀರ್ಮಾನಿಸಿದ್ದೇನೆ. ಬರುವ  ದಿನಗಳಲ್ಲಿ ನಮ್ಮ ಮುಂದಿನ ಸಮುದಾಯಕ್ಕೆ  ಏನಾದರೂ ಪ್ರಯೋಜನ ಆಗಬಹುದು ಎಂಬ ಆಶಾಭಾವನೆ ಇಟ್ಟುಕೊಂಡಿದ್ದೇನೆ. ಈ ವಿಷಯದಲ್ಲಿ ಚರ್ಚೆ, ತೀರ್ಮಾನ,ಆತ್ಮ ವಿಮರ್ಶೆಗೆ ನಮ್ಮನ್ನು ನಾವು  ಒಡ್ಡಿಕೊಳ್ಳಬೇಕು ಎಂಬುದೇ ನನ್ನ ಈ ಬರಹದ ಸದಾಶಯ .


ಭರವಸೆಯೇ  ಬೆಳಕಲ್ಲವೇ ?
ಫಾರೂಖ್ ಕುಕ್ಕಾಜೆ 


ಬ್ಯಾರಿಗಳ  ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಈ ಕೆಳಗಿನ ಕೊಂಡಿ ತೆರೆದು ಓದಿ


http://www.karnatakabearysahithyaacademy.org

http://en.wikipedia.org/wiki/Beary

http://en.wikipedia.org/wiki/Beary_language
    



ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

  1. ಸರಳವಾಗಿ ಹಾಗೂ ಮನಮುಟ್ಟುವಂತೆ ಇರುವ ಈ ಬರಹವನ್ನೂ ಅರ್ಥಮಾಡಿಕೊಳ್ಳಲು ನಾವು ವಿಫಲವಾದರೆ ಅದು ನಮ್ಮ ದುರಂತ.

    ಪ್ರತ್ಯುತ್ತರಅಳಿಸಿ