ಒಂದು ಯುದ್ದ ಪ್ರಸಂಗ



ಅದು ೧೯೯೦. ಇರಾಕ್ ಆಗ ಕುವೈಟನ್ನು ಆಕ್ರಮಿಸಿದ ಕಾರಣ ಯುದ್ದ ಆರಂಭವಾಗಿತ್ತು.ನಾನಾಗ ಪ್ರಾಥಮಿಕ  ಶಾಲೆಯಲ್ಲಿ ಓದುತ್ತಿದ್ದೆ. ನಮ್ಮ ಊರಿನ ಪಕ್ಕದಲ್ಲೆಲ್ಲೂ ಟಿ ವಿ ಇರದಿದ್ದ ಸಮಯದಲ್ಲಿ ನ್ಯೂಸ್ ಗಾಗಿ ರೇಡಿಯೋವನ್ನೇ ಅಶ್ರಯಿಸಬೇಕಾಗಿತ್ತು. ಬೀಡಿ ಕಟ್ಟಿ  ಬದುಕುತ್ತಿದ್ದ 'ಎಚ್ಚು ಪೊರ್ಬು' ರವರಿಗೆ ಅವರ ಗಲ್ಫ್ ಉದ್ಯೋಗಿ ಸಂಬಂದಿಯೊಬ್ಬರು ಕೊಟ್ಟ ರೇಡಿಯೋ ಮಾತ್ರ ನಮ್ಮ ಊರಿನ ನ್ಯೂಸ್ ಚಾನೆಲ್ ಆಗಿ ಪ್ರಸಿದ್ದಿ ಹೊಂದಿತ್ತು. ದಿನಕ್ಕೆ ಎರಡು ಹೊತ್ತು ಪ್ರಸಾರವಾಗುತ್ತಿದ್ದ ಕನ್ನಡ ವಾರ್ತೆಗೆ ಊರಿಡೀ  ಕಿವಿಯಾಗುತ್ತಿತ್ತು. ಯುದ್ದದ ವಾರ್ತೆಯ ನಂತರ ಎಚ್ಚು ಪೊರ್ಬು ಮತ್ತು ಮೀನು ವ್ಯಾಪಾರಿ ಮೋನು ಬ್ಯಾರಿ ಯವರ ನಡುವೆ ನಡೆಯುವ  ವಾಗ್ಯುದ್ದವು ಅದಕ್ಕಿಂತಲೂ ರೋಚಕವಾಗಿತ್ತು.


ಬುಶ್ ಪಾತ್ರವನ್ನು ಎಚ್ಚು ಪೊರ್ಬು, ಸದ್ದಾಮ್ ಪಾತ್ರವನ್ನು ಮೋನು ಬ್ಯಾರಿಯವರು ಯಾವ  ಪೂರ್ವಸಿದ್ದತೆಯಿಲ್ಲದೆ ಅಭಿನಯಿಸಿ  ಯುದ್ದದ ಬಗ್ಗೆಗಿನ ನಮ್ಮ ಕುತೂಹಲವನ್ನು ಇನ್ನೂ ಹೆಚ್ಚಿಸುತ್ತಿದ್ದರು. ಇರಾಕಿನಲ್ಲಿ ಸುರಿದದ್ದಕ್ಕಿಂತ ಬಾಂಬು ಇಲ್ಲಿ ಸುರಿಯಲಾಗುತಿತ್ತು . ಅಲ್ಲಿ ಹಾರಿದ ಕ್ಷಿಪಣಿಗಳಿಗಿಂತ ಹೆಚ್ಚು ಕ್ಷಿಪಣಿ  ಇಲ್ಲಿ ಹಾರುತ್ತಿತ್ತು. ಕೊನೆಗೆ ಇಬ್ಬರಿಗೂ ಆಯಾಸವಾಗಿ ಇಲ್ಲವೇ ಯಾರದ್ದಾದರೂ ಸಂಧಾನದಿಂದ ತಮ್ಮ ತಮ್ಮ ಮನೆ ಸೇರುತ್ತಿದ್ದರಾದರೂ ಯುದ್ದದ ಕಾವು ಇಳಿಯುತ್ತಿರಲಿಲ್ಲ.



ಯುದ್ದದ ಗುಂಗಿನಲ್ಲಿ ಯೇ ನಿದ್ದೆ ಹೋಗುತಿದ್ದ ನನಗೆ ಬುಶ್, ಸದ್ದಾಮ್ , ಯುದ್ದ,ಬಾಂಬ್ , ಕ್ಷಿಪಣಿ  ಅಷ್ಟು ಸುಲಭವಾಗಿ ಅರ್ಥವಾಗದ  ಪದಗಳಾಗಿದ್ದರೂ, ನಿದ್ದೆಯಲ್ಲಿಬಾಂಬ್ ಬಾಂಬ್” ಎಂದು ಅಬ್ಬರಿಸುತ್ತಿದ್ದ ನನ್ನನ್ನು ಸಮಾಧಾನ ಪಡಿಸಿ ಅಮ್ಮ ನಿದ್ದೆ ಮಾಡಿಸುತಿದ್ದುದು ಈಗಲೂ ನೆನಪಿದೆ .ಪ್ರತೀ  ಸಂಜೆ ಮೋನು ಬ್ಯಾರಿಯವರು ಪೊರ್ಬುಳುಗೆ ಅವರಿಷ್ಟದ ಬಂಗುಡೆ ಬೂತಾಯಿ ತಂದು ಕೊಟ್ಟ ಸ್ವಲ್ಪ ಹೊತ್ತಿನ  ನಂತರದ ವಾರ್ತೆಯ ಮುಕ್ತಾಯದೊಂದಿಗೆ ಸುರುವಾಗುವ ಈ ‘ಗಲ್ಫ್’ ಯುದ್ದವು; ಬೆಳಿಗ್ಗೆ ಎಚ್ಚು ಪೊರ್ಬುಳು ಕೊಟ್ಟ ಬೀಡಿ ಸೇದುತ್ತಾ  ಮೋನು ಬ್ಯಾರಿ ಹೊರಡುವುದರೊಂದಿಗೆ  ಶಾಂತಿ ನೆಲೆಸುತ್ತಿತ್ತು. ಆದರೆ ಬೆಳಗ್ಗೆದ್ದು ಹಲ್ಲುಜ್ಜುತ್ತಾ ಪಕ್ಕದ ಅವರ ಮನೆಯ ಕಡೆ   ಇಣುಕಿ ನೋಡುವ ನನಗೆ, ಕಳೆದ ರಾತ್ರಿ  ಮನೆಯಂಗಳವನ್ನು ರಣರಂಗ ಮಾಡಿ ಯುದ್ದ ಮಾಡಿದೋರು ಇವರೇನಾ? ಎಂಬ ಸಂಶಯ,ಅಚ್ಚರಿ ಕಾಡುತ್ತಿತ್ತು


ಇವತ್ತು ಬುಶ್ .ಸದ್ದಾಮ್ ಎಲ್ಲೋ ಏನೋ ಆಗಿರಬಹುದು ಆದರೆ  ನಮ್ಮ ಮೋನು ಬ್ಯಾರಿ ಮತ್ತು ಎಚ್ಚು ಪೋರ್ಬುಗಳು ಅನ್ಯೋನ್ಯವಾಗಿ ಅಕ್ಕ ಪಕ್ಕದಲ್ಲೇ ಇದ್ದಾರೆ.


ಫಾರೂಖ್ ಕುಕ್ಕಾಜೆ

(ವಿ. ಸೂ :- ವಗ್ಗರಣೆ ಯೊಂದಿಗೆ ಹೆಸರು ಬದಲಿಸಿ  ಬರೆದಿದ್ದೇನೆ . ವೈಯಕ್ತಿಕವಾಗಿ ತಗೋಬೇಡಿ )




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು