ನೇಪಾಳ- ನಿಮ್ಮ ನೋವಿನಲ್ಲಿ ನಾವು ಕೂಡ ನಾವು ಸಹಭಾಗಿಯಾಗಿದ್ದೇವೆ ....





ನೇಪಾಳದಲ್ಲಿ 1934ರ ಬಳಿಕ ಅಂದ್ರೆ ಸುಮಾರು 80 ವರ್ಷಗಳ ಬಳಿಕ   ಭಾರೀ ಭೂಕಂಪವಾಗಿದೆ. ಇದುವರೆಗೂ ಸುಮಾರು 2000 ಕ್ಕೂ ಹೆಚ್ಚು  ಜನರು ಮೃತಪಟ್ಟ ಬಗ್ಗೆ ವಾರ್ತೆ ಬರ್ತಾ ಇದೆ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ  ಸುದ್ದಿ ತುಣುಕುಗಳು ಕಲ್ಲು ಹ್ರದಯವನ್ನೂ ಕರಗಿಸುವಂತಿದೆ. ಕ್ಷಣ ಕಾಲದ ಈ ದುರಂತಕ್ಕೆ ಮನುಷ್ಯನ ಜಂಘಾ ಬಲವೇ ಹುಡುಗಿ ಹೋಗಿದೆ. ಸಹಾಯದ ಕೈಗಳು ಕೈ ಜೋಡಿಸುತ್ತಿದೆಯಾದರೂ ಈ ಶಾಕ್ ನಿಂದ  ಚೇತರಿಸಲು ನೇಪಾಳಕ್ಕೆ ಇನ್ನೂ ಕೆಲವು ತಿಂಗಳುಗಳೇ ಬೇಕಾದೀತು.

ನಾನು ಶಾಲಾ ದಿನಗಳಲ್ಲಿ ನೇಪಾಲದ ಬಗ್ಗೆ  ಸ್ವಲ್ಪ ಓದಿದ್ದು ಬಿಟ್ಟರೆ ನನಗೆ ಅವರ ಬಗ್ಗೆ ಅಷ್ಟು ಗೊತ್ತಿರಲೇ ಅಲ್ಲ. ನೇಪಾಳಿಗಳು ನಮ್ಮೂರಲ್ಲಿ ಗೂರ್ಖಾ ಕೆಲಸ ಮಾಡುತ್ತಾರೆ , ತುಂಬಾ ಬಡವರು ಅಂತಾನೂ  ಹೇಳೋದು ಕೇಳಿದ್ದೆ . ಉದ್ಯೋಗ ನಿಮಿತ್ತ ಹೊರದೇಶಕ್ಕೆ ಬಂದ ಮೇಲೆ ಹಲವು  ರಾಷ್ಟ್ರದವರ  ಜೊತೆ ಕೆಲಸ ಮಾಡುವ, ಬೆರೆಯುವ,ಅರಿಯುವ  ಅವಕಾಶ ದೊರೆಯಿತು. ಮೊದಮೊದಲು ಚೀನಾದ ಮುಖಚರ್ಯೆ ಹೊಂದಿರುವ ನೇಪಾಳಿಗರನ್ನು ತಪ್ಪಾಗಿ ಗ್ರಹಿಸಿಕೊಂಡದ್ದು ಇದೆ. ಅವರು ಹಿಂದಿ ಮಾತಾಡುವಾಗ ಚೀನಾದವನ ಬಾಯಿಯಲ್ಲಿ "ನಮ್ಮ ಹಿಂದಿಯಾ " ಎಂದು ಆಶ್ಚರ್ಯಪಟ್ಟದ್ದೂ ಇದೆ.

ನಾನು ಗಮನಿಸಿದ ಹಾಗೆ ನಮ್ಮ ನೆರೆಹೊರೆಯ ರಾಷ್ಟ್ರಗಳ ಪೈಕಿ ಇತರರಿಗೆ  ಹೋಲಿಸಿದರೆ ನೇಪಾಳಿಗರು ತುಂಬಾ  ಒಳ್ಳೆಯವರು. ಸ್ನೇಹಜೀವಿಗಳು, ಕರುಣೆ ಉಳ್ಳವರು, ಹೊಂದಿಕೊಂಡು ಬಾಳಬಲ್ಲವರು. ಅವರ ಅನುಷರಣಾ ಶೀಲತೆಯನ್ನು ಕೆಲವರು ಗುಲಾಮಗಿರಿಗೆ ಬಳಸಿದ್ದೂ ಉಂಟು. ಎಲ್ಲೋ ಕೆಲವು ಅಪವಾದಗಳು ಅವರ ಬಗ್ಗೆ  ಇರಬಹುದಾದರೂ ಯಾವ ದೇಶವರೂ ಅಪವಾದ ಮುಕ್ತರಲ್ಲ ಎಂಬುದನ್ನು ಕೂಡ ನಾವು ಗಮನಿಸಬೇಕಾಗಿದೆ.

ಡ್ರೈವರ್ ಕೆಲಸ ಮಾಡುತ್ತಿರುವ ಗಣೇಶ , ಸೆಕ್ಯೂರಿಟಿ ಗಾರ್ಡ್ ಆಗಿರುವ ಬಹದ್ದೂರ್,  ಕೊರಿಯರ್ ನಲ್ಲಿ ಕೆಲಸ ಮಾಡುತ್ತಿರುವ ರಾಜು , ಸೇಲ್ಸ್ ಮ್ಯಾನ್ ಆಗಿರುವ ನಿರ್ಮಲ್ ಇವರೆಲ್ಲ ನಾನು ದಿನಾ ನೋಡುವ ನೇಪಾಳಿ ಮುಖಗಳು. ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತ  ಅವರ ಕಷ್ಟ ಸುಖಗಳನ್ನೂ   ನನ್ನಲ್ಲಿ ಒಮ್ಮೊಮ್ಮೆ ಹಂಚ್ಕೊಂದು ನಿರಾಳವಾಗುವುದು ಇದೆ. ಈಗ ಅವರ ಮುಖದಲ್ಲಿ ಹೇಳಲಾಗದ ವಿಷಾದದ ಛಾಯೆ ಎದ್ದು ಕಾಣುತ್ತಿದೆ .
ನನಗೂ ಅವರ ಮುಖವನ್ನು ನೇರ ನೋಡಲಾಗುತ್ತಿಲ್ಲ . ಯಾವಾಗಲೂ ನಗು ನಗುತ್ತಾ ಇದ್ದ ನಿರ್ಮಲ್ ನ ತೊಟ್ಟಿಕ್ಕಿದ ಕಣ್ಣೀರು ನೂರಾರು ವ್ಯಥೆಗಳನ್ನು ಶಬ್ದಗಳಿಲ್ಲದೆ ಹೇಳುತ್ತಿದೆ.

ಜಾತಿ, ಮತ  ಧರ್ಮ, ಗಡಿ ಗಳನ್ನೂ ಮೀರಿ ಬರುವ ಈ ನೋವಿನಿಂದ ಹೊರ ಬರಲು  ಸರ್ವಶಕ್ತನಾದ ದೇವನು  ಅವರಿಗೆ ಸಹನೆ , ಶಾಂತಿ  ನೀಡಲಿ. ಮತ್ತೆ ಎಂದಿನಂತೆ ಸಹಜವಾದ  ದೈನಂದಿನ ಜೀವನಕ್ಕೆ ಮರಳುವ ಸಾಮರ್ಥ್ಯ, ಭಾಗ್ಯ ಕರುಣಿಸಲಿ ಎಂಬುದೇ ನನ್ನ ಪ್ರಾರ್ಥನೆ.

ಫಾರೂಖ್ ಕುಕ್ಕಾಜೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು