ಬರಹಗಾರನ ಜೀವನದಲ್ಲಿ ಟೀಕೆ ಹೊಸದಲ್ಲ. ನಾನು ಬರೆಯಲು ಆರಂಭಿಸಿದ ದಿನದಿಂದಲೇ ಒಪ್ಪುವವರೂ ಇದ್ದರು, ಒಪ್ಪದವರೂ ಇದ್ದರು. ಅದೇ ಸಾಹಿತ್ಯದ ಸೌಂದರ್ಯ. ಎಲ್ಲರೂ ಒಂದೇ ರೀತಿ ಯೋಚಿಸಿದರೆ ಬರಹಕ್ಕೂ, ಚರ್ಚೆಗೂ ಅರ್ಥವೇ ಇರುವುದಿಲ್ಲ.
ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಬದಲಾವಣೆ ಕಾಣುತ್ತಿದೆ. ಈಗ ಜನರು ಬರಹವನ್ನು ಓದಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಕ್ಕಿಂತ, ಬರಹಗಾರನನ್ನು ಒಂದು ಗುಂಪಿಗೆ ಸೇರಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಲೇಖನದ ಆಶಯ ಏನು ಎಂಬುದಕ್ಕಿಂತ, ಲೇಖಕ ಯಾವ "ಕ್ಯಾಂಪ್"ನವನು ಎಂಬ ಕುತೂಹಲವೇ ಹೆಚ್ಚು.
ಮಹಿಳೆಯರ ಸಮಸ್ಯೆಗಳ ಬಗ್ಗೆ ಬರೆದರೆ, ಕೆಲವರು "ಗಂಡಸಾಗಿ ಇದೇಕೆ?" ಎಂದು ಕೇಳುತ್ತಾರೆ. ಹೆಂಗಸರ ಮೇಲಿನ ಅನ್ಯಾಯವನ್ನು ಖಂಡಿಸಿದರೆ ''ಪುರುಷ ವಿರೋಧಿ'' ಎನ್ನುವವರಿದ್ದಾರೆ. ಮೂಢನಂಬಿಕೆಗಳ ಬಗ್ಗೆ ಪ್ರಶ್ನೆ ಮಾಡಿದರೆ ''ಸಂಸ್ಕೃತಿ ವಿರೋಧಿ''. ಧರ್ಮದ ಹೆಸರಿನಲ್ಲಿ ನಡೆಯುವ ತಪ್ಪುಗಳನ್ನು ಬರೆದರೆ ''ಧರ್ಮದ್ರೋಹಿ''. ನ್ಯಾಯದ ಬಗ್ಗೆ ಮಾತನಾಡಿದರೆ ''ದೇಶದ್ರೋಹಿ''. ದಲಿತರ ಬಗ್ಗೆ ಬರೆದರೆ ''ಎಡಪಂಥೀಯ''. ರಾಜಕಾರಣವನ್ನು ವಿಶ್ಲೇಷಿಸಿದರೆ ''ಸರ್ಕಾರದ ವಿರೋಧಿ''.
ಹಾಗಾದರೆ ಬರಹಗಾರ ಬರೆಯಬೇಕಾದದ್ದು ಏನು? ಕೆಲವೊಮ್ಮೆ ಯೋಚಿಸುತ್ತೇನೆ. ಹೂವು, ಚಂದ್ರ, ಮಳೆ ಇವಷ್ಟನ್ನೇ ಬರೆಯಬೇಕೇ? ಸಮಾಜದ ನೋವು, ಅನ್ಯಾಯ, ಅಸಮಾನತೆ, ದ್ವಂದ್ವಗಳ ಬಗ್ಗೆ ಮಾತನಾಡಬಾರದೇ? ಬರಹ ಎಂದರೆ ಕೇವಲ ಮನರಂಜನೆಯೇ? ಸಮಾಜವನ್ನು ಪ್ರಶ್ನಿಸುವ ಹಕ್ಕೂ ಅದಕ್ಕಿಲ್ಲವೇ?
ಇನ್ನೊಂದು ಸಂಗತಿ ನನ್ನನ್ನು ಹೆಚ್ಚು ಕಾಡುತ್ತದೆ. ಹಿಂದೆ ವ್ಯಂಗ್ಯ ಬರೆಯುವುದು ಒಂದು ಕಲೆ ಎಂದು ಭಾವಿಸಲಾಗುತ್ತಿತ್ತು. ಈಗ ವ್ಯಂಗ್ಯ ಬರೆದರೂ ವಿವರಣೆ ಕೊಡಬೇಕು. ರೂಪಕ ಬಳಸಿದರೂ ಅದು ಯಾರನ್ನು ಉದ್ದೇಶಿಸಿದೆ ಎಂದು ಕೇಳುತ್ತಾರೆ. ಕವಿತೆಯನ್ನೂ ಅಕ್ಷರಶಃ ಓದುವ ಕಾಲ ಬಂದಿದೆ. ಪದಗಳ ಹಿಂದೆ ಇರುವ ಭಾವಕ್ಕಿಂತ, ಪದಗಳ ಮೇಲೆ ಕೋಪಗೊಳ್ಳುವ ಜನ ಹೆಚ್ಚು ಕಾಣಿಸುತ್ತಿದ್ದಾರೆ.
ನನಗೆ ಟೀಕೆಯ ಬಗ್ಗೆ ಬೇಸರವಿಲ್ಲ. ಒಬ್ಬ ಓದುಗ ನನ್ನ ಮಾತನ್ನು ಒಪ್ಪದೇ ಇರಬಹುದು. ಅದು ಅವನ ಹಕ್ಕು. ನನ್ನ ಲೇಖನಕ್ಕೆ ಉತ್ತರವಾಗಿ ಮತ್ತೊಂದು ಲೇಖನ ಬರೆಯಬಹುದು. ನನ್ನ ವಾದವನ್ನು ತಪ್ಪೆಂದು ಸಾಬೀತುಪಡಿಸಬಹುದು. ಅದೇ ಆರೋಗ್ಯಕರ ಸಂವಾದ.ಆದರೆ ಈಗ ನಡೆಯುತ್ತಿರುವುದು ಸಂವಾದವಲ್ಲ. ಮೊದಲು ಹಣೆಪಟ್ಟಿ ಅಂಟಿಸಲಾಗುತ್ತದೆ, ನಂತರ ದಾಳಿ ನಡೆಯುತ್ತದೆ. ಕೆಲವೊಮ್ಮೆ ಲೇಖನವನ್ನು ಓದದೇ ಅಭಿಪ್ರಾಯ ಹೇಳಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸಾಲುಗಳನ್ನು ಮಾತ್ರ ತೆಗೆದು ಹರಿಬಿಡಲಾಗುತ್ತದೆ. ಉಳಿದ ಬರಹ ಯಾರಿಗೂ ಬೇಕಾಗುವುದಿಲ್ಲ.
ಇಂತಹ ವಾತಾವರಣದಲ್ಲಿ ಬರಹಗಾರನ ದೊಡ್ಡ ಶತ್ರು ಹೊರಗಿನ ಸೆನ್ಸಾರ್ ಅಲ್ಲ; ಒಳಗಿನ ಸೆನ್ಸಾರ್. "ಇದನ್ನು ಬರೆದರೆ ಅನಗತ್ಯ ವಿವಾದವಾಗಬಹುದೇ?" ಎಂದು ಯೋಚಿಸುತ್ತಾ ನಾವು ನಮ್ಮದೇ ವಾಕ್ಯಗಳನ್ನು ಕತ್ತರಿಸಿಕೊಳ್ಳಲು ಆರಂಭಿಸುತ್ತೇವೆ. ಇದೇ ನನಗೆ ಹೆಚ್ಚು ಭಯ ಹುಟ್ಟಿಸುವ ಸಂಗತಿ. ಏಕೆಂದರೆ ಈ ಭಯ ನಿಧಾನವಾಗಿ ನಮ್ಮ ಆಲೋಚನೆಗಳನ್ನೇ ಸೀಮಿತಗೊಳಿಸುತ್ತದೆ.
ಬರಹಗಾರನ ಕೆಲಸ ಯಾರನ್ನಾದರೂ ಮೆಚ್ಚಿಸುವುದು ಅಲ್ಲ. ಯಾರನ್ನಾದರೂ ನೋಯಿಸುವುದೂ ಅಲ್ಲ. ಅವನ ಕೆಲಸ ಸಮಾಜವನ್ನು ಗಮನಿಸುವುದು, ಕಂಡದ್ದನ್ನು ಪ್ರಾಮಾಣಿಕವಾಗಿ ದಾಖಲಿಸುವುದು, ಅಗತ್ಯವಿದ್ದಾಗ ಪ್ರಶ್ನಿಸುವುದು. ಆ ಪ್ರಶ್ನೆಗಳು ಕೆಲವರಿಗೆ ಅಸಹ್ಯವಾಗಬಹುದು. ಆದರೆ ಅಸಹ್ಯವಾಗುತ್ತದೆ ಎಂಬ ಕಾರಣಕ್ಕೆ ಪ್ರಶ್ನೆಗಳೇ ನಿಲ್ಲಬಾರದು.
ಸಾಹಿತ್ಯ ಜೀವಂತವಾಗಿರಬೇಕಾದರೆ, ಭಿನ್ನಾಭಿಪ್ರಾಯಕ್ಕೂ ಜಾಗ ಇರಬೇಕು. ಭಿನ್ನಾಭಿಪ್ರಾಯಕ್ಕೆ ಉತ್ತರ ಮತ್ತೊಂದು ಭಿನ್ನಾಭಿಪ್ರಾಯವಾಗಿರಬೇಕು. ಹಣೆಪಟ್ಟಿ, ಬೆದರಿಕೆ ಅಥವಾ ವ್ಯಕ್ತಿಹತ್ಯೆಯಾಗಬಾರದು. ಬರಹಗಾರರನ್ನು ಮೌನಗೊಳಿಸುವ ಸಮಾಜಗಳು ಮೊದಲಿಗೆ ಗೆದ್ದಂತೆಯೇ ಕಾಣಬಹುದು. ಆದರೆ ಕೊನೆಗೆ ಸೋಲುವುದು ಆ ಸಮಾಜವೇ. ಏಕೆಂದರೆ ಪ್ರಶ್ನೆ ಕೇಳುವುದನ್ನು ಮರೆತ ಸಮಾಜ, ಒಂದು ದಿನ ಯೋಚಿಸುವುದನ್ನೂ ಮರೆತುಬಿಡುತ್ತದೆ.

0 ಕಾಮೆಂಟ್‌ಗಳು