ಮಹಾತ್ಮ ಗಾಂಧೀಜಿ


ಅಪಪ್ರಚಾರಕ್ಕೆ ಈಡಾಗುತ್ತಿರುವ ಕಾಲದಲ್ಲಿ ಒಂದೆರಡು ಮಾತು....
--------------------------------------------------------------------------
 ಮಹಾತ್ಮನ ಬಗ್ಗೆ ಹೆಚ್ಚೇನು ನಾನು ತಿಳಿದಿಲ್ಲವಾದರೂ,ಯಾರೋ ಕೆಲವರು ಅಂದುಕೊಂಡಂತೆ ಗಾಂದಿ ಪರಿಪೂರ್ಣರಲ್ಲದಿದ್ದರೂ, ಅಪರಿಪೂರ್ಣರಂತೂ ಖಂಡಿತ ಅಲ್ಲ.ತಾನು ನಂಬಿಕೊಂಡ ಸಿದ್ಧಾಂತಕ್ಕೋಸ್ಕರ ಜೀವನ ಪರ್ಯಂತ ಅರೆಬೆತ್ತಲೆ ಪಕೀರನಂತೆ ಬದುಕುವುದು ನಮ್ಮಿಂದ ಸಾಧ್ಯವೇ?

 ಅನ್ನಾಹಾರವನ್ನು ಮಿತವಾಗಿಸಿ,ವೈದಿಕ ಸಂಸ್ಕೃತಿಯನ್ನು ಅನುಸರಿಸಿ, ಮನುಷ್ಯ ವಿರೋಧಿ ಆಧುನಿಕತೆಯನ್ನು ವಿರೋಧಿಸಿ,ಅಹಿಂಸೆಯನ್ನು ಬೋಧಿಸಿ ಗುರಿ ಮುಟ್ಟುವುದು ನಮ್ಮಿಂದ ಸಾಧ್ಯವೇ?

 ಸ್ವಾತಂತ್ರ ಸಿಕ್ಕಿದ್ದು ಕೇವಲ ಗಾಂಧೀಜಿಯವರಿಂದ ಅಲ್ಲ ಎನ್ನುವುದು ಎಷ್ಟು ನಿಜವೋ ಅದಕ್ಕಾಗಿ ಲಕ್ಷ ಲಕ್ಷ ಭಾರತೀಯರ ರಕ್ತತರ್ಪಣವಾಗಿದೆ ಅನ್ನೋದು ಕೂಡ ಅಷ್ಟೇ ಸತ್ಯ.ಆದರೆ ಸ್ವಾತಂತ್ರ್ಯ ಸಂಗ್ರಾಮದ ಕೊನೆಯವರೆಗೆ ಒಬ್ಬ ಮಹೋನ್ನತ ನಿಸ್ವಾರ್ಥಿ ನಾಯಕನಿದ್ದ.ಅದು ಗಾಂಧಿ.ನಾಯಕನಿಲ್ಲದ ಸೈನ್ಯ ಕುರಿ ಮಂದೆಯಂತೆ.ಆದರೆ ಹಾಗಾಗದಂತೆ ದಿಕ್ಸೂಚಿ ತೋರಿಸಿ ಮುನ್ನಡೆಸಿದ ಕೀರ್ತಿ ಗಾಂಧೀಯದ್ದು.

 ಯಾವ ತೀವ್ರವಾದವೂ ಪರಿಣಾಮ ಬೀರದ ಆ ಕಾಲದಲ್ಲಿ ಕೇವಲ ಶಾಂತಿ ಮಂತ್ರ ಬೋಧಿಸಿದ ಗಾಂಧಿ ಹಲವರ ತೀವ್ರ ವಿರೋಧದ ನಡುವೆಯೂ ತಾನು ನಂಬಿದ್ದ ಮಾನವೀಯ ಮೌಲ್ಯವನ್ನು ಬಿಟ್ಟುಕೊಡದೆ ಮೆರೆದ ಛಲದಿಂದಾಗಿಯೇ ಮಹಾತ್ಮನಾಗಿ ಕಾಣುತ್ತಾರೆ.

ಶಾಂತಿ ಶಾಂತಿ ಎಂದು ನೂರು ಸಲ ಬೊಬ್ಬಿಡುವ ನಾವು ಕ್ಷಣ ಕಳೆದಂತೆ ರೋಷಾವೇಶ ಕಳೆದುಕೊಂಡು ಬರಡಾಗುತ್ತೇವೆ. ಆದರೆ ಗಾಂಧಿ ಅದನ್ನೇ ನಂಬಿದ್ದರು.ಹಾಗೆಯೇ ಬದುಕಿದ್ದರು.ಸ್ವಲ್ಪ ತಡವಾಗಿದ್ದರೂ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಿತು ಕೂಡ.ಸತ್ಯವನ್ನು ನಂಬಿದ್ದ ಅವರು ನಮ್ಮೊಳಗಿನ ದಗಲ್ಬಾಜಿತನಗಳನ್ನು ಸರಿಯಾಗಿ ಅರಿಯದೆ ಭಾರತ -ಪಾಕ್ ವಿಭಜನೆಗೆ ಮೂಕಸಾಕ್ಷಿಯಾದದ್ದು, ಸಾವಿನ ಸೂಚನೆಯೇ ಅರಿಯದೆ 'ಹೇ ರಾಂ' ಅನ್ನುತ್ತಾ ಗುಂಡಿಗೆ ಶರಣಾದದ್ದು ವಿಧಿಯ ವಿಪರ್ಯಾಸ.

 ಗಾಂಧೀಜಿ ವಿರೋಧಿಸಿದ ಆಧುನಿಕತೆಯನ್ನು ಅಪ್ಪಿಕೊಂಡು ಮುಳುಗೇಳುತ್ತಿರುವ ಇಂದಿನ ಸಮಾಜಕ್ಕೆ 'ಗಾಂಧಿ ತತ್ವ' ಒಂದು ಪ್ರಹಸನ ಅಥವಾ ಹಾಸ್ಯಾಸ್ಪದ ವಿಷಯವಾಗಿ ಕಂಡರೆ ಅದು ಅಚ್ಚರಿಯಲ್ಲ."ಕೆಲವರಿಗೆ ಗಾಂಧಿ ಒಂದು ಮಂತ್ರವಾದರೆ,ಇನ್ನು ಕೆಲವರಿಗೆ ದೇವರು.ಇನ್ನು ಕೆಲವರು ಅವರು ನಡೆದ ದಾರಿಯ ದೂಳನ್ನು ಹಣೆಗೆ ಹಚ್ಚುತ್ತಿದ್ದರು.ಅವರ ದೇಹ ಸ್ಪರ್ಶಿಸಿ ಪುನೀತರಾಗಲು ಹಾತೊರೆಯುತ್ತಿದ್ದರು" ಎಂಬುದನ್ನು ನಾನು ಓದಿ ತಿಳಿದಿದ್ದೇನೆ.

 ಏನೇ ಇರಲಿ ಗಾಂಧಿ ಮಹಾತ್ಮರಾದದ್ದು ತ್ಯಾಗದಿಂದ.ಹಾಗೆಂದು ಅವರು ತಪ್ಪು ಮಾಡಿಯೇ ಇರಲಿಲ್ಲ ಅಂತ ನಾನು ಒಪ್ಪುದಿಲ್ಲ.ಆದರೆ ಅವರು ಪಾಲಿಸಿದ ಜೀವನ ಧರ್ಮವನ್ನು ಅದೂ ಸಾರ್ವಜನಿಕವಾಗಿ ನಿರ್ವಹಿಸಲು ಖಂಡಿತವಾಗಿಯೂ ಯಾರಿಗೂ ಸಾಧ್ಯವಿಲ್ಲ ಎಂಬುದು ನಿಚ್ಚಳ ಸತ್ಯ.

 ಸಾವಿರಾರು ಕವಿಗಳಿಗೆ,ಬರಹಗಾರರಿಗೆ, ಮೇಧಾವಿಗಳಿಗೆ,ರಾಜತಾಂತ್ರಿಕರಿಗೆ,ಸೇವಾ ನಿರತರಿಗೆ ಆದರ್ಶಪ್ರಾಯರಾದ ಗಾಂಧಿ ಕೇವಲ ಒಂದು ವ್ಯಕ್ತಿಯಾಗಿರದೆ ಸಮೂಹದ ಶಕ್ತಿಯಾಗಿದ್ದರು.

ಎಲ್ಲವೂ ಏಕಪಕ್ಷೀಯವಾಗಿ ತೀರ್ಮಾನವಾಗುತ್ತಿರುವಾಗ ಈ ಕಾಲದಲ್ಲಿ ಗಾಂಧಿ ಆದರ್ಶ ಪುರುಷರೆಂದು ಒಪ್ಪಿಕೊಳ್ಳದಿರಲು ಮುಖ್ಯ ಅಡಚಣೆಯೆಂದರೆ ಅವರ ಸರಳ ತತ್ವದ ಆಚರಣೆಗೆ ಜನರು ತೋರುತ್ತಿರುವ ನಿಷ್ಕಾಳಜಿಯಾಗಿದೆ. ಅಶಾಂತಿ ಬಿತ್ತುವ ಅಮೇರಿಕ ಹೇಳಿದವರಿಗೆ ಶಾಂತಿ ಪ್ರಶಸ್ತಿ ಸಿಗುತ್ತಿರುವಾಗ,ಟೀಕೆ ಮಾಡುವುದನ್ನೇ ಸಾಹಿತ್ಯವೆಂದು ತಿಳಿದುಕೊಂಡವರಿಗೆ ಬಿರುದು ಸಿಗುತ್ತಿರುವಾಗ, ಸರಿಯಾಗಿ ಪಾಠವೇ ಮಾಡಲರಿಯದವರು ಜನಮೆಚ್ಚಿದ ಶಿಕ್ಷಕರಾಗಿ ಆಯ್ಕೆಯಾಗುತ್ತಿರುವಾಗ,ಇತರರ ಕಾಲೆಳೆಯುವವರು ಸನ್ಮಾನಿತರಾತ್ತಿರುವ ಈ ಕಾಲದಲ್ಲಿ "ನೀನು ಗಾಂಧಿ ತತ್ವ ಪಾಲಿಸು" ಎಂದರೆ ನಾವು ನಗೆಪಾಟಲಿಗೆ ಈಡಾಗುತ್ತಿದ್ದೇವೆ ಎನ್ನುವುದೇ ದುರಂತ.

ಕೊನೆಯದಾಗಿ ಹೇಳುವುದಿಷ್ಟೆ- ನಾನು ಕಂಡಂತೆ ಗಾಂಧಿ ಎಂದರೆ ಹಿಂಸೆಯ ವಿರೋಧಿಯಾದ ಶಾಂತಿಯ ಪ್ರಬಲ ಪ್ರತಿಪಾಧಕ.ಯಾವ ಪ್ರಶಸ್ತಿಗಳಿಂದಲೂ ಪುರಸ್ಕೃತರಾಗದ ಅವರು ನಿಜಕ್ಕೂ ಮಹಾತ್ಮನೇ ಸರಿ.ನಾವು ಅವರನ್ನು ೧೦೦% ಒಪ್ಪುವುದು ಸಾಧ್ಯವಿಲ್ಲವಾದರೂ ಒಂದು ಸರಳ ತತ್ವಕ್ಕಾಗಿ ಬದುಕಿ,ಮಡಿದ ಅವರ ಜೀವನ ಶೈಲಿಯನ್ನು ೧೦೦%ಕ್ಕಿಂತ ಹೆಚ್ಚಾಗಿ ಮೆಚ್ಚುವುದು ಅನಿವಾರ್ಯವಾಗುತ್ತದೆ.

ಜನವರಿ 30.ನಮ್ಮರಾಷ್ಟ್ರ ಪಿತ ಮಹಾತ್ಮಾ ಗಾಂಧಿ ಅನ್ಯಾಯವಾಗಿ ಗುಂಡಿಗೆ ಬಲಿಯಾದ ದಿನ.ಈ ಒಂದು ದಿನವನ್ನು 'ಆತ್ಮ ವಿಮರ್ಶನಾ ದಿನ'ವನ್ನಾಗಿ ಮಾಡಿ ಶಾಂತಿಯುತ ಭವ್ಯ ಭಾರತವನ್ನು ಕಟ್ಟುವ ಸಂಕಲ್ಪ ಮಾಡೋಣ.

ಜೈ ಹಿಂದ್
# ಉಪಾಕು#ಹುತಾತ್ಮನಾದ ಮಹಾತ್ಮನ ನೆನಪಿನಲ್ಲಿ#
  • Write a comment...

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು