ಎಲಸರ




ಅವರಿಬ್ಬರೂ ಪುಟ್ಟ ಮಕ್ಕಳು .ಇರ್ಫಾನ್ ಮತ್ತು ಇಹ್ಶಾನ್. ಈಗಷ್ಟೇ ಎಲ್ .ಕೆ ಜಿ ಯಿಂದ ಯು ಕೆ ಜಿ ಗೆ ಭಡ್ತಿ ಪಡೆದಿದ್ದರು. ಶಾಲೆಯ ಆರಂಭದ ಖುಷಿಯೊಂದಿಗೆ ಅಬ್ಬಾಸ್ ಮಾಮನ ರಿಕ್ಷಾದಲ್ಲಿ ಹೊರಟವರು ಸಂಜೆ ಶಾಲೆ ಮುಗಿಸಿ ಮಾತನಾಡುತ್ತಾ ಕಾಲ್ನಡಿಗೆಯಲ್ಲಿ ಅರ್ಧ ಗಂಟೆಯಷ್ಟೇ ದಾರಿಯಿರುವ  ಮನೆಯ ಕಡೆಗೆ  ಹೊರಟಿದ್ದರು. ಕೆಲವರ ಅಪ್ಪ  ಅಮ್ಮಂದಿರು ಶಾಲೆಯ ಮೊದಲ ದಿನ ತಮ್ಮ ಮಕ್ಕಳ ಜೊತೆ ಬಂದದ್ದು ನೋಡಿದ  ಇವರಿಬ್ಬರಿಗೂ ಚಿಂತೆ ಹತ್ತಿತ್ತು.
******
 " ಇರ್ಫಾನ್, ನಿನ್ನಪ್ಪ ಯಾಕೋ ಶಾಲೆಗೆ ಬಂದಿಲ್ಲ'" ಎಂದು ಇಹ್ಸಾನ್ ಕೇಳಿದ.
ಇರ್ಪಾನ್ : - "ನನ್ನಪ್ಪ ಗಲ್ಫ್ ನಲ್ಲಿ ಇರೋದು. ವರ್ಷಕೊಮ್ಮೆ ಮಾತ್ರ ಬಂದು  ಹೋಗ್ತಾರೆ. ಒಂದು ಸಲ ಅಪ್ಪ ನನ್ನನ್ನು ಮತ್ತು ಅಮ್ಮನನ್ನು ಗಲ್ಫ್ ಗೆ ಕರೆಸಿಕೊಂಡಿದ್ರು. ಆ ಗಲ್ಫ್ ತುಂಬಾ ಚಂದ ಇದೆ ಕಣೋಅದು ಹೌದು ನಿನ್ನಪ್ಪ ಇವತ್ತು ಶಾಲೆಗೆ ಯಾಕೆ ಬಂದಿಲ್ಲ" ಎಂದು ಕೇಳಿದ.
ಇಹ್ಸಾನ್ :-"ನನ್ನಪ್ಪ  ಸ್ವರ್ಗಕ್ಕೆ ಹೋಗಿ ನಾಲ್ಕು ವರ್ಷ ಆಯ್ತು ಅಂತ ಮೊನ್ನೆ ಅಮ್ಮ ಹೇಳ್ತಾ ಇದ್ರು. ಅವರು ಇಲ್ಲಿವರೆಗೆ ನಮ್ಮನ್ನು ನೋಡಲು ಬರಲೂ ಇಲ್ಲ .ನಮ್ಮನ್ನು ಅಲ್ಲಿಗೆ ಕರೆಸಿ ಕೊಳ್ಳಲು ಕೂಡ ಇಲ್ಲ " ಎಂದು ತುಂಬಾ ವಿಷಾದದಿಂದ ಹೇಳಿದ.
******
ಮನೆ ತಲುಪಿದ ಕೂಡಲೇ ಅಮ್ಮನ ಬಳಿ ಹೋದ ಇಹ್ಸಾನ್ "ಇರ್ಫಾನ್ ಅಪ್ಪ ಗಲ್ಫ್ ನಲ್ಲಿ ಇರೋದಂತೆ.ವರ್ಷಕೊಮ್ಮೆ ಬರ್ತಾರಂತೆ.ಅವನು ಕೂಡ ಗಲ್ಫ್ ಗೆ ಹೋಗಿ ಬಂದನಂತೆ. ಯಾಕಮ್ಮ.. ನನ್ನ ಅಪ್ಪ ಬರೋದೆ ಇಲ್ಲ . ನಮ್ಮನ್ನು ಸ್ವರ್ಗಕ್ಕೆ ಕರೆಸಿಕೊಂಡಿಲ್ಲ.ನಮ್ಮಿಬ್ಬರನ್ನು ಅಲ್ಲಿಗೆ ಬೇಗ ಕರೆಸಿಕೊಳ್ಳಲು ಅಪ್ಪನಿಗೆ ನೀನು ಹೇಳಮ್ಮ " ಎಂದು ಅಳ ತೊಡಗಿದ.

ಉತ್ತರವಿಲ್ಲದ ಐಸಮ್ಮ ಬೀಡಿ ಸೋಪು ಪಕ್ಕಕ್ಕಿಟ್ಟು, ಮಗನನ್ನು ಬಿಗಿದಪ್ಪಿ ಉಕ್ಕಿ ಬಂದ ಕಣ್ಣೀರನ್ನು ಯಾರಿಗೂ  ಕಾಣದಂತೆ ತನ್ನ ಎಲಸರದಿಂದ ಒರೆಸಿ ಕೊಂಡಳು .


# ಫಾರೂಖ್ ಕುಕ್ಕಾಜೆ #

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು