ಸಾಮಾಜಿಕ ಸಾಮರಸ್ಯದಲ್ಲಿ ಯುವಕರ ಪಾತ್ರ



ಉತ್ತಮ  ಸಮಾಜದ ನಿರ್ಮಾಣ ಮಾಡುವುದಕ್ಕೆ ರಾಷ್ಟ್ರದ  ನಿರ್ಮಾಣವೆಂದು ಹೇಳಬಹುದು. ಸಮಾಜವೆಂದರೆ ಒಬ್ಬನಲ್ಲ. ಪರಸ್ಪರ ಸುಖ ಶಾಂತಿಯನ್ನು ಬಯಸುವುದರ ಮೂಲಕ ತನ್ನ  ಮತ್ತು ಸಮಾಜದ ಏಳಿಗೆಯನ್ನು ಸಾಧಿಸಿಕೊಳ್ಳುವುದೇ ಮನುಷ್ಯತ್ವದ ಲಕ್ಷಣ. ತಾನು ಎಂಬ ಸಂಕುಚಿತ ಮನೋಭಾವನೆಯನ್ನು ಬಿಟ್ಟು ತನ್ನ ಸಮಾಜ, ತನ್ನ ದೇಶ ಎಂಬ ವಿಶಾಲ ಕ್ಷೇತ್ರವನ್ನು ಕಾಣುವ ದೃಷ್ಟಿಯುಳ್ಳ ವ್ಯಕ್ತಿಗಳ ಸಮೂಹವನ್ನು ನಾವು ಅತ್ಯುತ್ತಮ ಸಮಾಜವೆಂದು ಕರೆಯಬಹುದು. ಮನೆಯ ಅಸ್ತಿತ್ವವು ಅದರ ಒಂದೊಂದು ಇಟ್ಟಿಗೆಯನ್ನು  ಅವಲಂಬಿಸಿಕೊಂಡಿರುವಂತೆ ಸಮಾಜದ ಅಸ್ತಿತ್ವವು  ಅದರ ಪ್ರತಿಯೊಬ್ಬ ವ್ಯಕ್ತಿಯನ್ನು  ಆಧರಿಸಿಕೊಂಡಿದೆ. ಬಡವನಾಗಲೀ ಬಲ್ಲಿದನಾಗಲೀ ಅವನು ತನ್ನ ಕರ್ತವ್ಯವನ್ನು ಮರೆತನೆಂದರೆ ಸಮಾಜದ ತನ್ಮೂಲಕ ದೇಶದ ಏಳಿಗೆಗೆ ಅಷ್ಟೊಂದು ಹಾನಿಯಾಯಿತೆಂದೇ ಅರ್ಥ.
ಸ್ವಾಮಿ ವಿವೇಕಾನಂದರುಏಳಿ, ಎದ್ದೇಳಿ ಎಚ್ಚರಗೊಳ್ಳಿರಿ ಗುರಿಮುಟ್ಟುವ ತನಕ ನಿಲ್ಲದಿರಿ” ಭಾರತದ ಯುವಜನತೆಗೆ ನೀಡಿದ ಕರೆ ಇದು. ಆದರೆ ಇಂದಿನ ಯುವಕರು  ದೇಶದಲ್ಲಿರುವ ಶಿಕ್ಷಣದ ಖಾಸಗೀಕರಣ, ಔದ್ಯೋಗೀಕರಣ, ಕೋಮು ಗಲಭೆ , ಪರಸ್ಪರ ವಿದ್ವೇಷ  ಹಾಗೂ ಸಾಮಾಜಿಕ ಅಸಮಾನತೆಯನ್ನು ನೋಡಿ ಬೇಸತ್ತು ಅಡ್ಡದಾರಿ ಹಿಡಿಯುತ್ತಿದ್ದಾರೆ. ದುಶ್ಚಟಗಳಿಗೆ ಬಲಿಯಾಗುವುದಲ್ಲದೆ ತಮ್ಮ ಸುಂದರವಾದ ಭವಿಷ್ಯತ್ತನ್ನು ಹಾಳು ಮಾಡಿಕೊಂಡು ದೇಶದ ಭವಿಷ್ಯತ್ತಿಗೆ ಕಂಟಕವಾಗಿ ಬೆಳೆಯುತ್ತಿದ್ದಾರೆ. ದೇಶದ ಭವಿಷ್ಯತ್ತು ಯುವಜನರನ್ನು ಅವಲಂಬಿಸಿದೆ. ಅದೇ ರೀತಿ ಯುವಜನರ ಬದುಕು ಅವರ ಕೈಯಲ್ಲೇ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಯುವನಾಯಕರು ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಚಿಂತಿಸದೆ ದೇಶದ ಬಗ್ಗೆ ಚಿಂತಿಸುತ್ತಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ  ಅನೇಕ ಯುವನಾಯಕರು ಇಂದಿನ ಯುವಜನಾಂಗಕ್ಕೆ ಆದರ್ಶವಾಗಿ ಚರಿತ್ರೆಯ ಪುಟಗಳಲ್ಲಿ ಸೇರಿದ್ದಾರೆ. ಆದರೆ ಅಂಥ ಹಿರಿಯರ  ಆದರ್ಶಗಳನ್ನು ಅಳವಡಿಸಿಕೊಳ್ಳಲು  ಇಂದಿನ ಯುವಜನಾಂಗ ನಿರಾಶಕ್ತಿ ತೋರುತ್ತಿವೆ.
ವಸ್ಥುಸ್ಥಿತಿ ಹೀಗಿರುವಾಗ ಯುವಕರ ಹೊಣೆಗಾರಿಕೆಯೂ ರಾಷ್ಟ್ರದ ಪಾಲಿಗೆ ಅಗತ್ಯ. ಯುವಕರು  ಚಿಕ್ಕವರಾಗಿರಬಹುದು, ಅನನುಭವಿಗಳಾಗಿರಬಹುದು. ತೇರನ್ನೆಳೆಯಬೇಕಾದರೆ ನೂರಾರು ಜನ ಕೈಕೊಡಬೇಕಾಗುತ್ತದೆ. ಹಾಗೆಯೇ ಯುವಕರು ತಮ್ಮ ಅಳಿಲ ಸೇವೆಯನ್ನು ಸಲ್ಲಿಸಿದರೆ ಉತ್ತಮ ಸಮಾಜದ  ನಿರ್ಮಾಣದ ಕಾರ್ಯ ಸುಗಮವಾಗಿಯೇ ತೀರುವುದು. ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಅನೇಕ ಯುವಕರ ತ್ಯಾಗ, ಬಲಿದಾನಗಳ ಹೋರಾಟಗಳಿಂದ ದೇಶ ಸ್ವಾತಂತ್ರ್ಯ ಪಡೆಯಿತು. ಇಂತಹ ಸ್ವಾತಂತ್ರ ರಾಷ್ಟ್ರದಲ್ಲಿ ಇಂದು ಸ್ವತಂತ್ರರಾಗಿ ಬಾಳಿ ಬದುಕಲು ಕಷ್ಟವಾಗಿದೆ. ದೇಶದ ಮಂತ್ರ ಯುವಕರ ಭವಿಷ್ಯತ್ತು ಯುವಕರ ಕೈಯಲ್ಲಿಯೇ ಇದೆ. ಆದ್ದರಿಂದ ನಮಗೆ ಬೇಕಾದ ಎಲ್ಲವನ್ನು ಪಡೆದಿರುವುದು ಹೋರಾಟದಿಂದಲೇ ಆಗಿರುವುದರಿಂದ ದೇಶದ ಅಭಿವೃದ್ಧಿಗಾಗಿ ಸಾಮಾಜಿಕ ಪರಿವರ್ತನೆಗಾಗಿ ಶಾಂತ ಹೋರಾಟವೊಂದು ನಡೆಯಬೇಕಿದೆ. ಸಮಾಜದಲ್ಲಿ ತಾಂಡವ ಮಾಡುತ್ತಿರುವ ಬಡತನ, ಭ್ರಷ್ಟಾಚಾರ, ಭಯೋತ್ಪಾದನೆ, ಅನಾಚಾರ, ಅಸಮಾನತೆ, ನಿರುದ್ಯೋಗ, ದೌರ್ಜನ್ಯ, ದಬ್ಬಾಳಿಕೆಗಳನ್ನು ನಿಯಂತ್ರಿಸಬೇಕಾಗಿದೆ. ನಶಿಸಿ ಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಉಳಿಸಬೇಕಾಗಿರುವ ಜವಾಬ್ದಾರಿ ನಮ್ಮ ಯುವಜನತೆಯದು, ಇಂದಿನ ಸಮಾಜದ ಸ್ಥಿತಿಯೇ ಮುಂದುವರೆದರೆ ಮಕ್ಕಳು ತಮ್ಮ ಸುಂದರ ಭವಿಷ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಹಿರಿಯರು ಹಾಕಿಕೊಟ್ಟಿರುವ ಅಡಿಪಾಯವನ್ನು ನಾವು ಮುಂದಿನ ಜನಾಂಗಕ್ಕೆ ಉಳಿಸಿಕೊಡಬೇಕಿದೆ. ಆದ್ದರಿಂದ ಸಮಾಜವನ್ನು ತಿದ್ದಲು ಯುವಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. 
ಪ್ರತಿಯೊಬ್ಬ ಯುವಕನು  ಮೊತ್ತ ಮೊದಲು ತನ್ನ ಸ್ಥಿತಿಯನ್ನು ತಿಳಿದುಕೊಂಡು ತನ್ನನ್ನು ಮೊದಲು ಸುಸಂಸ್ಕೃತ ಜನಾಂಗದ ಪಂಕ್ತಿಯಲ್ಲಿ ಸೇರಿಸಿಕೊಳ್ಳಬೇಕು. ಅನಂತರ ತನ್ನ ನಡೆ, ನುಡಿ, ಕಾರ್ಯ ತತ್ಪರತೆಗಳ ಕುರಿತು ಯೋಚಿಸಿ, ಅದನ್ನು ಸರಿಯಾದ ರೂಪಕ್ಕೆ ತರಬೇಕು. ಊರಿನ ಎಲ್ಲಾ ಮಕ್ಕಳೂ, ಇಂದಿನ ಮಕ್ಕಳೇ ಮುಂದಿನ ಜನಾಂಗದವರು ಎಂದು ತಿಳಿದುಕೊಂಡು ನಾಡಿನ ಹೊಣೆಗಾರಿಕೆಯನ್ನು ಅರಿತುಕೊಂಡು, ದೇಶ ತನ್ನ ಸೇವೆಗಾಗಿ ಹಾತೊರೆಯುತ್ತಿದೆ ಎಂಬುದನ್ನು ಗಮನಿಸಬೇಕು. ಮತ್ತು ತನ್ನ ಹಿರಿಮೆಯನ್ನು ಸಾಧಿಸಿ ಮುನ್ನಡೆಯಬೇಕು. ಯುವಕರು ತನ್ನ ಸುತ್ತ ಮುತ್ತಲಿನ ವಾತಾವರಣವನ್ನು ದೇಶದ ಅಭಿವೃದ್ದಿಗೆ ನೆರವಾಗುವಂತೆ ಹೊಂದಿಸಬೇಕು. ಆದರೆ ಹಿಂದುಳಿದ ತನ್ನ ಹಳ್ಳಿಯ ಜನರಿಗೆ ಸಮಾಜವೆಂದರೆ ಏನು, ಸಮಾಜದಿಂದಾಗುವ ಪ್ರಯೋಜನ ಇವುಗಳನ್ನು ತಿಳಿಸುವುದು. ಅನಕ್ಷರಸ್ಥರಾದ ತನ್ನ ನೆರೆಹೊರೆಯವರಿಗೆ ವಿದ್ಯೆಯಿಂದಾಗುವ ಪ್ರಯೋಜನವನ್ನು ಹೇಳಿ ಅಕ್ಷರಸ್ಥರನ್ನಾಗಿ ಮಾಡಲು ಪ್ರಯತ್ನಿಸುವುದು. ಹೀಗೆ ಪ್ರತಿಯೊಬ್ಬ ಯುವಕನು  ‘ಕಾರ್ಯ ನನ್ನದು ಸಫಲತೆ ನಿನ್ನದುಎಂಬ ಭಾವನೆಯಿಂದ ದುಡಿಯಬೇಕು. ಸಮಾಜದ ಎಲ್ಲಾ ಸಮಾಚಾರಗಳನ್ನು ತಿಳಿದು ತನ್ನವರಿಗೆ ಹೇಳುತ್ತಾ ಬಂದರೆ ದೇಶದ ಅಭಿವೃದ್ಧಿ ಯೋಜನೆಗಳ ತಿಳುವಳಿಕೆ ಎಲ್ಲರಲ್ಲಿಯೂ ಮೂಡುವಂತಾಗುವುದು. ಜನರ ಆಸಕ್ತಿ ಕೆರಳುವುದು. ಹೊರಗಿನ ಪ್ರಪಂಚವನ್ನೇ ಅರಿಯದ ಜನರಿಗೆ ಸಮಾಜದ ಪರಿಚಯ ಮಾಡಿಕೊಂಡು ಬಂದರೆ, ಅಂದರೆ ಸಮಾಜದಲ್ಲಿರುವ ವ್ಯಕ್ತಿಯಲ್ಲಿರಬೇಕಾದ ಗುಣಗಳನ್ನು ತಿಳಿಸುತ್ತಾ ಬಂದರೆ ಅವರೂ ಓಡುತ್ತಿರುವ ಜಗತ್ತಿನೊಡನೆ ಓಡಲು ಯತ್ನಿಸುವರು. ಯುವಕರು ತಮ್ಮ  ಬಿಡುವಿನ ಸಮಯವನ್ನು ಹಾಳು ಮಾಡುವುದರ ಬದಲಾಗಿ ಊರಿನ ಜನರಿಗೆ ರಾಷ್ಟ್ರ ನಿರ್ಮಾಣ ಮಾಡುವುದರ ಉದ್ದೇಶಗಳನ್ನೋ ಅಥವಾ ಒಳ್ಳೆಯ ವಿಚಾರಗಳನ್ನು ತಿಳಿಸಿದರೆ ರಾಷ್ಟ್ರ ನಿರ್ಮಾಣವು ಸುಗಮವಾಗುವುದು.

ಯುವಜನರನ್ನು ದುರ್ಬಲರನ್ನಾಗಿಸುವ ನೂರಾರು ಕತೆ, ಘಟನೆ, ರಾಜಕೀಯ ವಿಚಾರಗಳು ನಿತ್ಯವೂ ಕಂಡು ಬರುವಂತದ್ದು ಇವೆಲ್ಲವೂ ಯುವಕರ ಮನಸ್ಸನ್ನು ತಲ್ಲಣಗೊಳಿಸುತ್ತದೆ. ಇಂದು ನಾಗರೀಕತೆ ಹೆಚ್ಚಿದಂತೆ ಕ್ರೌರ್ಯವೂ ಕೂಡ ಹೆಚ್ಚುತ್ತಿದೆ. ಹಿಂಸೆ ನಿರಂತರ ಮತ್ತು ನಿರಾತಂಕವಾಗಿ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಆಯಾಯ ಧರ್ಮವನ್ನು ಸರಿಯಾಗಿ ಅರಿತುಕೊಳ್ಳದೇ ಇರುವುದು. ಆದರೆ ಇಂತದವುಗಳಿಗೆಲ್ಲ ಶಕ್ತಿ ಕಳೆದುಕೊಳ್ಳದೆ ಅದನ್ನು ದಾಟಿ ಮುಂದೆ ಹೋಗಬೇಕಾದ ಅನಿವಾರ್ಯತೆ  ಇದೆ.  ಬಹಳ ಶತಮಾನಗಳ ಹಿಂದೆಯೇ ನಮ್ಮ ಹಿರಿಯರು ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ. ಅದರ ಅರ್ಥವನ್ನು ಇಂದು ಸರಿಯಾಗಿ ಅರ್ಥೈಸಿಕೊಳ್ಳಲು ಸರ್ವಧರ್ಮ ತತ್ವಗಳು ಸಹಕಾರಿಯಾಗಿವೆ. ಸರ್ವಧರ್ಮವನ್ನು ಅರಿತರೆ  ಶಾಂತಿ ಸಹಬಾಳ್ವೆಯನ್ನು ಕಾಪಾಡಲು ಪ್ರೇರಕ ಶಕ್ತಿ ಸಿಗುತ್ತದೆ . ಯಾವುದೇ ಧರ್ಮವಿರಲಿ ಅದರ ಅಂತಿಮ ಗುರಿ ಶಾಂತಿ, ಸಹಬಾಳ್ವೆಯನ್ನು ಕಾಪಾಡುವುದಾಗಿದೆ . ಧರ್ಮವು  ಮೂಲತಹ  ಯಾವುದೇ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ ಎಂಬುದನ್ನು ಯುವಕರು ಮನಗಾಣಬೇಕು. ಪ್ರತಿಯೊಬ್ಬರನ್ನು ಪ್ರೀತಿಸಿದರೆ  ಪ್ರತಿಯೊಂದು ಧರ್ಮವನ್ನು ಗೌರವಿಸಿದರೆ ಮಾತ್ರ ಕೆಟ್ಟ ವಿಚಾರಗಳನ್ನು ನಾಶ ಮಾಡಲು ಸಾಧ್ಯ ಎಂಬ ಸತ್ಯವನ್ನು ಅರಿಯಬೇಕು.


ಯುವಜನತೆ ಕಳೆದುಹೋದ ಸಮಯದ ಬಗ್ಗೆ ಚಿಂತಿಸದೇ ಮುಂದೆ ಉತ್ತಮ ನಾಯಕತ್ವವನ್ನು ಬೆಳೆಸಿಕೊಳ್ಳಬೇಕು. ಸಮಾಜಸೇವೆಗಾಗಿ ಸರ್ವತ್ಯಾಗಕ್ಕೂ ಸಿದ್ಧರಾಗಬೇಕು. ಭವ್ಯ ಭಾರತದ ಕನಸನ್ನು ಕಾಣುವಂತಾಗಬೇಕು. ಅದರಲ್ಲಿ ತಮ್ಮ ಭವಿಷ್ಯವನ್ನು ಕಂಡುಕೊಳ್ಳುವ ಹಾಗೆ ಆಗಬೇಕು. ಆಗ ಮಾತ್ರ ಭವ್ಯ ಸಮಾಜ ಕಲ್ಪನೆ ಸಾಧ್ಯ. ದೇಶವೆಂಬ ಮನೆಯ ತೊಲೆಗಂಬದಂತಿರುವ ಯುವಕರು  ಮೊದಲು ತಾವು ಬಲಯುತವಾಗಿ ಅನಂತರ ತಮ್ಮವರನ್ನೂ ಬಲಯುತರನ್ನಾಗಿ ಮಾಡಲು ಹೊರಟರೆಂದರೆ ದೇಶದೇಳ್ಗೆಯಾಗುವುದು ಖಂಡಿತ. ಬುದ್ದಿವಂತರಾದ ವಿದ್ಯಾವಂತರಾದ ಯುವಕರು  ತಮ್ಮ ಸಮಾಜ ಮತ್ತು  ದೇಶದ ಬಗ್ಗೆ ಅಭಿಮಾನವಿಟ್ಟು ಅದಕ್ಕೆ ಪೂರಕವಾದ ಮುಖ್ಯ ಕೆಲಸಗಳನ್ನು ಮಾಡಿದರೆ,ಇತರರು ಮಾಡುವುದಕ್ಕಿಂತ ಉತ್ತಮವಾಗಿರುವುದು.

ಒಂದು ಬೆಳಕಿನಿಂದ ಇನ್ನೊಂದು ಬೆಳಕು ಮೂಡುವಂತೆ ಒಂದು ಹಣತೆಯಿಂದ ನೂರಾರು ಹಣತೆಗಳುರಿದು ಲೋಕವೇ ಕಾಂತಿಯುಕ್ತವಾಗುತ್ತದೆ. ಹೊಳೆಯುವ ಹೊಂಬೆಳಕಿನಿಂದ, ಸುಖದ-ಶಾಂತಿಯ ಸಂಕೇತದಿಂದ ಲೋಕವು ಸ್ವರ್ಗವಾಗಿ ಮೆರೆಯುತ್ತದೆ’.ಹಾಗೆಯೇ ಪ್ರತಿಯೊಬ್ಬ ಯುವಕನೂ  ದೇಶದ  ಹಿರಿಯ ನಾಯಕರ  ಯೋಜನೆಗಳನ್ನು ಅರಿತು ಅದನ್ನು  ಹಳ್ಳಿಯ ಮೂಲೆ ಮೂಲೆಗಳಿಗೂ ತಲುಪಿಸಿ ಅವರಿಗೆ ಅದರ ತಿರುಳನ್ನು ತಿಳಿಸಿದರೆ ಕಾರ್ಯವು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಸಾಮರಸ್ಯದ ಸಮಾಜ ಮತ್ತು ರಾಷ್ಟ್ರ ನಿರ್ಮಾಣದ  ಕರೆಗಳನ್ನು ಯುವಕರು  ಹಳ್ಳಿ ಹಳ್ಳಿಗೂ ತಿಳಿಸುವ ಸಂದೇಶವಾಹಕನಾಗಬೇಕು . ತನ್ನ ಹಳ್ಳಿಯ ಕುಂದು ಕೊರೆತೆಗಳನ್ನೂ ಸರ್ಕಾರದ ಗಮನಕ್ಕೆ ತರುವ ಕಾರ್ಯಕ್ಕೆ ಯುವಕರು  ಮುಂದಾಗಬೇಕು. ದೇಶದ ಪ್ರತಿಯೊಂದು ಕಾರ್ಯವೂ ಪವಿತ್ರವಾದುದು, ಪುನೀತವಾದುದು ಎಂಬ ಭಾವನೆಯು ಮೂಡಿ ಸ್ವಾವಲಂಬನೆಯ ಕೆಚ್ಚು  ಯುವಕರಲ್ಲಿ  ಮೂಡಬೇಕು. ಆಗ ಯುವಕರು  ಉತ್ತಮ ಸಮಾಜ  ನಿರ್ಮಾಣ ಕಾರ್ಯದಲ್ಲಿ ತಮ್ಮ  ಪಾತ್ರ ನಿರ್ವಹಿಸಿದಂತಾಗುತ್ತದೆ. ಹೀಗೆ ಯುವಕರು ಆತ್ಮವಿಶ್ವಾಸದಿಂದ ಮುನ್ನಡೆದರೆ ದೇಶವನ್ನು ಮುಂದೆ ಕೊಂಡೊಯ್ಯಲು ಸಾಧ್ಯ. 'ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವವರು ನಾವೇ. ಆದ್ದರಿಂದ ಎಲ್ಲಾ ಹೊಣೆಯನ್ನು ಹೊತ್ತುಕೊಂಡು  ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು .ಉತ್ತಮ  ಕಾರ್ಯವನ್ನು ತಾಳ್ಮೆಯಿಂದ ನಿರ್ವಹಿಸಬೇಕು' ಎಂಬ ಸಂಕಲ್ಪವನ್ನು  ಯುವಕರು ಮಾಡಿದರೆ ಸಂಪೂರ್ಣ ಯಶಸ್ಸು ಖಂಡಿತ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು