ಎತ್ತಣ ಮಾಮರ




ಅದೊಂದು ರವಿವಾರ .ಸಂಜೆಗತ್ತಲು ಸಮಯ .ಬೆಂಗಳೂರಿನ ಎಂ .ಜಿ ರೋಡ್ ಗೆ ಹೊಂದಿಕೊಂಡಂತೆ ಇರುವ ಬ್ರಿಗೇಡ್ ರೋಡ್ನಲ್ಲಿ ನನ್ನ ಸ್ನೇಹಿತ ಪುಟ್ಪಾತ್ ವ್ಯಾಪಾರ ಮಾಡ್ತಾ ಇದ್ದ . ಸಾಮಾನ್ಯವಾಗಿ ಒಂಟಿಯಾಗಿರುತ್ತಿದ್ದ ನಾನು ರವಿವಾರ ಬಂತೆಂದರೆ ಅವನ ಜೊತೆ ಅಲ್ಲೇ ನಿಂತು ಒಂದಷ್ಟು ಲೋಕಾಬಿರಾಮ ಮಾತಾಡೋ ರೂಡಿ ಮಾಡಿಕೊಂಡಿದ್ದೆ .

ಬೇರೆ ಬೇರೆ ಊರು, ನಗರ , ದೇಶಗಳಿಂದ ಬಂದ ಮಿಶ್ರ ಸಂಸ್ಕ್ರತಿ ಯ ಗಿರಾಕಿಗಳನ್ನು ಅವನು ಅಟೆಂಡ್ ಮಾಡೋ ರೀತಿ , ಅವನ ವ್ಯಾಪಾರ ಚಾಕಚಕ್ಯತೆಯನ್ನು ಕುತೂಹಲದ ಕಣ್ಣುಗಳಿಂದ ನೋಡುತ್ತಾ ನಿಂತರೆ ನನಗೆ ಸಮಯ ಹೋದದ್ದೇ ತಿಳಿಯುತ್ತಿರಲಿಲ್ಲ.

ಇವನು ಶೇವಿಂಗ್ ಸೆಟ್ ವ್ಯಾಪಾರ ಮಾಡುತ್ತಿದ್ದರೆ ಪಕ್ಕದಲ್ಲೇ ಶಿವಾಜಿ ನಗರದ ಖಾನ್ ಸಾಹೇಬರು ಮಕ್ಕಳ ಆಟಿಕೆ ಮಾರುತ್ತಿದ್ದರು. ಪೊಲೀಸರಿಗೆ ಬಕ್ಷೀಸು ಕೊಟ್ಟು ಯಾ ಪೋಲೀಸರ ಕಣ್ಣು ತಪ್ಪಿಸಿ ಯಾ ಮಸ್ಕಾ ಹೊಡೆದು ನಡೆಸುವ ಈ ಬೀದಿ ವ್ಯಾಪಾರಕ್ಕೆ ನಿರ್ದಿಷ್ಟ ಜಾಗ ಅಂತ ಇರೋದೇ ಇಲ್ಲ .ಅನಧಿಕೃತವಾದ ಈ ವ್ಯಾಪಾರ ಸಾಶ್ವತ ಅಲ್ಲವಾದರೂ , ಇರುವಷ್ಟು ದಿನ ವ್ಯಾಪಾರ ಮಾಡಿ ಬದುಕೋ ಛಾತಿ ಬೆಳೆಸಿಕೊಂಡ ಇಂಥ ಸಾವಿರಾರು ಜನ ಬೆಂಗಳೂರಿನಂಥ ಮಹಾನಗರದಲ್ಲಿ ಇದ್ದೇ ಇರ್ತಾರೆ .

ಹೀಗೆ ವ್ಯಾಪಾರದಿಂದ ಭರದಿಂದ ಸಾಗುತ್ತಿದ್ದಾಗ ಪಕ್ಕದ ಸಾಹೇಬರ್ರು ಮಾರುತ್ತಿದ್ದ ಆಟಿಕೆಗಾಗಿ ತಮಿಳ್ನಾಡಿನಿಂದ ಬೆಂಗಳೂರು ಸುತ್ತಲು ಬಂದ ಪ್ರವಾಸಿ ಗುಂಪಿನ ಮಗು ಒಂದು ರಚ್ಚೆ ಹಿಡಿದು ಕೂಗುತಿತ್ತು . ಹಣದ ಕೊರತೆಯಿಂದ ಆ ಮಗುವಿನ ಹೆತ್ತವರು ಕಸಿವಿಸಿಕೊಂಡು ಮಗುವಿಗೆ ಎರಡು ಬಾರಿಸಿ ಹೊರಡಲನುವಾದಾಗ, ಈ ಕಡೆ ಶೇವಿಂಗ್ ಸೆಟ್ ಖರೀದಿಸಲು ನಿಂತಿದ್ದ ವ್ಯಕ್ತಿಯೊಬ್ಬರು ಆ ಆಟಿಕೆ ಖರೀದಿಸಿ ಮಗುವಿಗೆ ಕೊಟ್ಟಾಗ ಅದರ ಸಂತೋಷ ಹೇಳತೀರದಷ್ಟಾಗಿತ್ತು . ಪೆಚ್ಚು ಮೊರೆ ಹಾಕಿ ನಿಂತಿದ್ದ ಅದರ ಹೆತ್ತವರು ಮೊದಲು ಅನಾಮಿಕನ ಕೊಡುಗೆ ನಿರಾಕರಿಸಿದರಾದರೂ ಒತ್ತಾಯದ ಮೇರೆಗೆ ಒಪ್ಪಿಕೊಂಡು ಥ್ಯಾಂಕ್ಸ್ ಹೇಳಿ ಹೊರಟಿದ್ದರು .

ಈ ಆಕಸ್ಮಿಕತೆಯ ಘಟನೆಯನ್ನು ಕುತೂಹಲ ತಡೆಯಲಾರದೆ ನನ್ನ ಗೆಳೆಯ ಆ ಅನಾಮಿಕನಲ್ಲಿ ಕೇಳಿಯೇ ಬಿಟ್ಟ.
ಅವರು ಹೇಳಿದ್ದು ಹೀಗೆ;- ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಆ ಒಮಾನಿ ವ್ಯಕ್ತಿ , ತಾಯ್ನಾಡಿಗೆ ಮರಳಿ ಕೆಲಸಕ್ಕೆ ಸೇರಿ ಮದುವೆಯಾಗಿ ಒಂದು ಹೆಣ್ಣು ಮಗುವಿತ್ತಂತೆ .ಆಕಸ್ಮಿಕ ಅವಘಡದಲ್ಲಿ ಆ ಮಗು ಎರಡು ತಿಂಗಳ ಹಿಂದೆ ಇಹಲೋಕ ತ್ಯಜಿಸಿತ್ತಂತೆ .ಪತ್ನಿಯ ಚಿಕಿತ್ಸೆಗೆ ಮತ್ತು ಸ್ವಲ್ಪ ನೆಮ್ಮದಿಗಾಗಿ ಭಾರತಕ್ಕೆ ಬಂದಿದ್ದ ಆ ವ್ಯಕ್ತಿ ತನ್ನ ಮಗುವಿಗೆ ಏನು ಕೊಡಬೇಕೆಂದು ತೋಚುತ್ತೋ ಅದನ್ನು ಇತರ ಮಕ್ಕಳಿಗೆ ಕೊಟ್ಟು ಸಂತ್ರಪ್ತಿ ಪಡುವ ಹವ್ಯಾಸ ಬೆಳೆಸಿಕೊಂಡಿದ್ದಾರಂತೆ. ಹೀಗೆ ಮನಬಿಚ್ಚಿ ಮಾತನಾಡಿದ ಆ ವ್ಯಕ್ತಿ ಆ ಜನಜಂಗುಳಿಯ ನಡುವೆ ಮಾಯವಾಗಿತ್ತು .

ಎಲ್ಲಿಯ ಅರಬಿ , ಎಲ್ಲಿಯ ತಮಿಳು ? ಎಲ್ಲಿಯ ಓಮನ್ ,ಎಲ್ಲಿಯ ತಮಿಳ್ ನಾಡು ?
ಮಾನವ ಸಂಭಂದಗಳು ಕಳಚಿ ಹೋಗುತ್ತಿರುವಾಗ
ಎತ್ತಣ ಮಾಮರ
ಎತ್ತಣ ಕೋಗಿಲೆ ?
ಎತ್ತಣಿಂದೆತ್ತ ಸಂಬಂಧವಯ್ಯ ? ಒಮ್ಮೆ ಯಾಕೋ ಅಲ್ಲಮಪ್ರಭುವಿನ ವಚನ ಮನಸ್ಸಲ್ಲಿ ಸುಳಿದು ಹೋಯಿತು.

ಫಾರೂಖ್ ಕುಕ್ಕಾಜೆ # ಜಸ್ಟ್ ಲವ್ ದಟ್ಸ್ ಆಲ್ #

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು