ಕೋಲ್ಮಿಂಚು


ವರು ಬಾರೀ ಶ್ರೀಮಂತರು
ಅವರ ಮನೆಯ ಗೋಡೆಯಲ್ಲಿ
ಧರ್ಮ ಸೂಕ್ತಿಯ ಅಲೆಗಳು.
ಎಷ್ಟು ಹಣವಿದ್ದರೇನು ಫಲ?
ಗುಣದಲ್ಲಿ ತುಂಬಾ ಬಡವರು
ಅವರು ಬಾಯಿ ತೆರೆದರೆ
ಬರೀ ಕೊಳಕು ಬೈಗುಳಗಳು.
-ಉಫಾಕು-

ಸಿದ್ಧಾಂತಗಳ ಮಾರುಕಟ್ಟೆಯಲ್ಲಿ
ಸಿದ್ಧಾಂತಿಗಳ ವ್ಯಾಪಾರ
ಬಲು ಜೋರಾಗಿತ್ತು.
ನಶ್ವರವಾದ ಈ ಲೋಕದಲ್ಲಿ
ಕಷ್ಟ ಪಟ್ಟವನಿಗೆ ಸ್ವರ್ಗವಿದೆ 
ಎಂಬ ಪದ ಬಾರಿ ಬಾರಿ ಕೇಳುತಿತ್ತು .
ಪಕ್ಕದ ಬೀದಿಯಲ್ಲಿದ
ಒಂದಷ್ಟು ಬಡ ಜೀವಗಳು
ದೇವಾ.. ನಮ್ಮ ಸಾಯುವ ದಿನಗಳ
ಬೇಗ ತರಬಾರದೇ?
ಎಂದು ಕಣ್ಣುತುಂಬಿ ಪ್ರಾರ್ಥಿಸುತ್ತಿತ್ತು.
-ಉಫಾಕು-

ಸೂಫಿ

(ವಿಭಿನ್ನ ದ್ರಷ್ಟಿ ಕೋನ) 



ಈ ಪಾಸು,ಪೈಲು
ಬರೀ ಓಳು.
ಪಾಸಾದರೂ,ಪೈಲಾದರೂ
ಬಾಳು ದಾರಿ ಮುಚ್ಚೋದಿಲ್ಲ
ಪಾಸಾದವನಿಗೆ ಕಾಲೇಜು ದಾರಿ
ಪೈಲಾದವನಿಗೆ ನೂರು ಹಾದಿ.
ಪ್ರಯತ್ನ ಪಡು ಮಗುವೇ
ನಾಳೆ ನಿನಗಾಗಿ ಕಾಯುತ್ತಿದೆ.
-ಉಫಾಕು-

ಕೋಗಿಲೆಗೆ
ಹಾಡೇ ಜೀವ
ಗೂಡಲ್ಲ
ಕಾಗೆಗೆ 
ಗೂಡೇ ಜೀವ
ಹಾಡಲ್ಲ
ಕೋಗಿಲೆಯ ಕಂಠಕ್ಕೆ
ಮರುಳಾದವರೇ
ಅದರ ಹುಟ್ಟಿಗೆ
ಆಶ್ರಯ ಕೊಟ್ಟ
ಕಾಗೆಯ ಮುಗ್ದತೆಯ
ಮರೆಯದಿರಿ
-ಉಫಾಕು-


ನಾವೆಲ್ಲರೂ ಯಾವುದೋ ಒಂದು ರೀತಿಯಲ್ಲಿ ನಾವೇ ಮಾಡಿಕೊಂಡ ವ್ಯವಸ್ಥೆಯೊಳಗಿನ ಗುಲಾಮರು.ಹಾಗೇಯೇ ಸ್ವಾತಂತ್ರ್ಯದೊಳಗಿನ ಗುಲಾಮತ್ವವನ್ನು ಅರಿಯದೆ ಸ್ವತಂತ್ರರೆಂದು ನಂಬಿಕೊಂಡ ಅಂಧರು.
-ಉಫಾಕು-

ಅಮ್ಮ ಎಂದೆಂದಿಗೂ ಅಮ್ಮನೇ,
ಮಕ್ಕಳು ಮಾತ್ರ ಬದಲಾಗುತ್ತಾರೆ.
ಅಮ್ಮ ಅಮ್ಮ ಆದ ದಿನದಿಂದ
ಎಲ್ಲಾ ದಿನವೂ ಅಮ್ಮನ ದಿನ.
ಅಮ್ಮನಿಗೆ ಮಕ್ಕಳ ಮುದ್ದು ಮಾತಿಗಿಂತ
ಮಿಗಿಲಾದ ಗಿಪ್ಟ್ ಯಾವುದೂ ಇಲ್ಲ.
-ಉಫಾಕು -

ಆವತ್ತು ಯಾವಾಗಲಾದರೊಮ್ಮೆ
ಹೋಗುತ್ತಿದ್ದ ಮದುವೆಯ
ದೊಂಪದಲ್ಲಿ ಕಾದು ಕಾದು
ಹಸಿವು ಸಾಯುವ ಹಂತದಲ್ಲಿ
ಸಿಕ್ಕ ನೈಚೋರು 
ಗಬ ಗಬನೆ ತಿನ್ನುತ್ತಿದ್ದಾಗ
ಸಿಗುತಿದ್ದ ಮಜಾ
ಈವತ್ತಿನ ಬಿರಿಯಾನಿಯಲ್ಲಿ ಸಿಗುತ್ತಿಲ್ಲ .
-ಉಫಾಕು-

ಕಮ್ಮಾರನ
ಸುತ್ತಿಗೆಗೂ
ಅಕ್ಕಸಾಲಿಗನ
ಸುತ್ತಿಗೆಗೂ
ವ್ಯತ್ಯಾಸವಿದೆ
ಕಮ್ಮಾರನ ಸುತ್ತಿಗೆ
ತನ್ನವರನ್ನೇ ಬಡಿಯುತ್ತದೆ
ಅಕ್ಕಸಾಲಿಗನ ಸುತ್ತಿಗೆ
ಇತರರನ್ನು ಬಡಿಯುತ್ತದೆ
ಅಲ್ಲಿ ಶಬ್ದ ಹೆಚ್ಚು
ಇಲ್ಲಿ ಶಬ್ದ ಕಮ್ಮಿ
ತನ್ನವರ ಬಡಿತಕ್ಕೂ
ಇತರರ ಬಡಿತಕ್ಕೂ
ನೋವುಗಳ ವ್ಯತ್ಯಾಸವಿದೆ
-ಉಫಾಕು -

ಅವರು 
ದೊಡ್ಡ ಕವಿಯಂತೆ
ಹೌದೌದು
ಅವರ
ಹ್ರದಯ ಮಾತ್ರ
ಚಿಕ್ಕದು
-ಉಫಾಕು -


ಅವರು
ನಂಜು ಕಾರಿ
ಸತ್ತರು
ಇವರು 
ಪಂಜು ಹಿಡಿದು
ಮುನ್ನಡೆದರು
-ಉಫಾಕು -

ಅವನು
ಅನಕ್ಷರಸ್ತ
ಆಗಿದ್ದಾಗ
ಎಲ್ಲರೂ ಹತ್ತಿರವಿದ್ದರು
ಅವನು ಬರೆಯ
ತೊಡಗಿದ ಮೇಲೆ
ಎಲ್ಲರೂ ದೂರ ಸರಿದು
ಬಿಟ್ಟು ಹೋದರು
-ಉಫಾಕು-

ಕವಿ
ಶಕ್ತಿ ಹೀನನಾಗಿರಬಹುದು
ಯುಕ್ತಿ ಹೀನನಲ್ಲ
ಕವಿಗೆ 
ವಸ್ತು ಮುಖ್ಯವೇ
ಹೊರತು ವ್ಯಕ್ತಿ ಮುಖ್ಯವಲ್ಲ
-ಉಫಾಕು-


ಅವನು
ಪಟ್ಟಿಂಗ ನಂತೆ
ಪೋಕ್ರಿಯಂತೆ
ಊರಿಡೀ ಬೆದರಿಸುತ್ತಿದ್ದ
ಇಂದು ಯಾರಿಗೂ
ಬೇಡದ
ಅನಾಥ ಶವವಾಗಿ
ಊರ ಚರಂಡಿಯಲ್ಲಿ ಬಿದ್ದಿದ್ದ.
-ಉಫಾಕು -

ಮೊದಲು
ಅನುಯಾಯಿಗಳಿಗೆಲ್ಲ
ಒಬ್ಬ ನಾಯಕರು
ಈಗ
ಅನುಯಾಯಿಗಳೇ ಇಲ್ಲ
ಎಲ್ಲರೂ ನಾಯಕರು
-ಉಫಾಕು-

ಕೆಲವು ವರ್ಷಗಳ
ಹಿಂದೆ ಎಲ್ಲ ಸರಿ ಇತ್ತು
ಅಪ್ಪ ಹುಟ್ಟಿದ ನಂತರ
ಮಗ ಹುಟ್ಟುತ್ತಿದ್ದ.
ಈಗ ಹಾಗಲ್ಲ
ಮಗ ಮೊದಲು ಹುಟ್ಟಿ
ಅಪ್ಪ ನಂತರ ಹುಟ್ಟುತ್ತಾನೆ
ಪೋಕಾಲದ ಮಹಿಮೆ ..
-ಉಫಾಕು-


ಮಹಾ ಭಾಗ್ಯವಾದ
ಹಜ್ಜ್ ಉಮ್ರಾ ಕ್ಕೆ
ಹೋಗುವವರೆಲ್ಲ
ಹೋಗಿ ಬನ್ನಿರಿ
ಆದರೆ ............
ಅಲ್ಲಿ ತೆಗೆದ
ಸೆಲ್ಪಿ ಪೋಟೋ
ಇಲ್ಲಿ ತಂದು ಹಾಕಿ
ಕುಲ್ಫಿಯ ಬೆಲೆಗೆ
ಪುಣ್ಯ ಕಳೆದುಕೊಳ್ಳದಿರಿ
-ಉಫಾಕು

ಪ್ರೀತಿ
ತಿರಸ್ಕರಿಸಿ
ಹೋದ
ಪ್ರೇಯಸಿಗೆ
ಬರೆ
ಹಾಕ ಹೊರಟ
ಹುಡುಗ
ಮನಸ್ಸು
ಬದಲಿಸಿ
ಬರೆಯತೊಡಗಿದ
ಕೊಲೆಗಾರ
ಆಗಬೇಕಾದವನು
ತಪ್ಪಿ ಕವಿಯಾದ
-ಉಫಾಕು-

ಯಂಶ ಮತ್ತು ಕಂದ
ಬಿಸಾಕಿದ
ಅಕ್ಷರಗಳನ್ನು ಎತ್ತಿ
ನಾನು
ಪದ ಬರೆಯುತ್ತೇನೆ
ಹುಸೇನಿ
ರಾಗ ಸೇರಿಸಿದ
ಮೇಲೆ
ಮುಹಾದ್
ಹಾಡುತ್ತಾನೆ.
-ಉಫಾಕು-

ನಮಗೀಗ
ಅತ್ಯಾಚಾರ
ಎಂಬುದು
ದೊಡ್ಡ ವಿಷಯವೇ ಅಲ್ಲ.
ಯಾಕೆಂದರೆ
ನಮ್ಮೊಳಗಿರುವ
ತುಡಿಯುವ ಹೃದಯ
ಸತ್ತೇ ಹೋಗಿದೆಯಲ್ಲ.
-ಉಫಾಕು-

ಕವಿಗೆ
ಬಿಟ್ಟಿಯಾಗಿ ಸಿಗುವ
ವಸ್ತುವೆಂದರೆ
ಪ್ರೀತಿ ಮಾತ್ರ
ಇದು
ಅನುಭವಿಸಬೇಕು
ಎಂದೇನಿಲ್ಲ
ಊಹಿಸಿದರೂ ಸಾಕು.
-ಉಫಾಕು-

ನನ್ನೊಳಗಿನ
ಆಕ್ರೋಶಗಳನ್ನೆಲ್ಲ
ಒಟ್ಟುಗೂಡಿಸಿ
ಮುಷ್ಟಿಯೊಳಗೆ
ತರುತ್ತೇನೆ.
ಹೂವುಗಳು
ಹೊಸಕಿ
ಹೋಗದಿರಲೆಂದು
ಮುಳ್ಳುಗಳಿಗೆ ಮಾತ್ರ
ಹೊಡೆದು ಬಿಡುತ್ತೇನೆ.
ಒಂದಷ್ಟು ನೋವು
ಗಾಯಗಳನ್ನು
ಸಹಿಸಿಕೊಂಡು
ನಿಟ್ಟುಸಿರು ಬಿಟ್ಟು
ನಿರಾಳವಾಗಿಬಿಡುತ್ತೇನೆ.
-ಉಫಾಕು-

ಬುದ್ದನಂತೆ
ಬದ್ದನಾಗದಿರೆ
ಬುದ್ದಿಯಿದ್ದು
ಏನು ಫಲ ?
ಸಾವಿಲ್ಲದ
ಮನೆಯ ಸಾಸಿವೆ
ತರಲು ಹೊರಟ
ಕಿಸಾಗೋತಮಿ
ಇನ್ನೂ ತಿರುಗಿ ಬಂದಿಲ್ಲ
ಹೌದು
ಆಸೆಯೇ
ದುಃಖಕ್ಕೆ
ಮೂಲ.
-ಉಫಾಕು-

ಯಾರು
ಎಲ್ಲಿಗೆ ಬೇಕಾದರೂ
ಕೈ ಕಟ್ಟಲಿ
ನಮಗೇನು ?
ಅವರರವರ
ಕಬ್ರ್ ಗೆ
ಅವರೇ ಹೋಗುವುದಲ್ಲದೆ
ನಾವೇನು ?
ಅವರಿವರ ನೋಡಿ
ಎದೆಯೊಳಗೆ
ಸ್ಪಷ್ಟ ನಿಯ್ಯತ್ತ್
ಇಲ್ಲದಿರೆ ಫಲವೇನು ?
-ಉಫಾಕು-

ಧನಿಕನೊಬ್ಬ
ತನಗೆ ಪುಣ್ಯ ಸಿಗಲೆಂದು
ಹತ್ತಾರು ಕಾರ್ಮಿಕರ
ಸಂಬಳ ನುಂಗಿ ನುಂಗಿ
ಕಟ್ಟಿಸಿದ ಒಂದು 
ಪ್ರಾರ್ಥನಾಲಯದಲ್ಲಿ
ಕಾರ್ಮಿಕರು
ದಿನಾ ಹೋಗಿ
'ದೇವಾ,ನಮ್ಮ ಸಂಬಳ
ಸರಿಯಾಗಿ ನೀಡಲು
ಧಣಿಗೆ ಮನಸ್ಸು ಕೊಡು'
ಎಂದು ಬೇಡುತ್ತಿದ್ದರು.
-ಉಫಾಕು-

ನೀನಿಲ್ಲದ ನಾನು
ಎಂಬುದೇ ವಿಷಾದ
ನೀ ನನ್ನೊಳಗಿರು
ಎಂಬುದು ಅಪೇಕ್ಷೆ
ಚಂದಿರ ನಕ್ಕ ದಿನ
ನೈದಿಲೆ ಅರಳಿ ಬಿಡಲಿ
-ಉಫಾಕು-

ನಿನ್ನೆ ಹಾಜಿಯಾರ್ ಸಿಕ್ಕಿದ್ದರು
"ಕಣ್ಣು ತೆರೆಸಿಬಿಟ್ಟೆಯಲ್ಲ"
ಎಂದು ಅತ್ತು ಬಿಟ್ಟರು
ಮಾಫ್ ಕೇಳಿದ ನನಗೆ
ದೇವ ನಮ್ಮನ್ನು ಕ್ಷಮಿಸಲಿ
ಎಂದು ಬಿಗಿದಪ್ಪಿ ಬಿಟ್ಟರು
-ಉಫಾಕು-
(Moideen Mazin ರವರ ಅಪೇಕ್ಷೆಯ ಮೇರೆಗೆ ಹಜ್ಜ್ ಭಾಗ ೨)


ಅವರೊಬ್ಬರು
ತನ್ನ ಜೀವನ
ಪಾವನವಾಗಲೆಂದು
ಬರೋಬ್ಬರಿ ಎರಡುವರೆ ಲಕ್ಷ
ಖರ್ಚು ಮಾಡಿ
'ಹಜ್ 'ಮಾಡಿ ಬಂದರು.
ಮಕ್ಕಾದ ಖರ್ಜೂರ,
ಝಮ್ ಝಮ್ ತಂದು
ಮೊಹಲ್ಲಾದ ಜನರಿಗೆಲ್ಲ ಕೊಟ್ಟರು.
ಒಂದು ವಾರ ಕಳೆದಿರಬೇಕು
ತನ್ನನ್ಯಾರು 'ಹಾಜಿಯಾರ್'
ಕರೆಯುವುದಿಲ್ಲವಲ್ಲ ಎಂಬ
ಕೋಪದಿಂದ ಮನದೊಳಗೆ ಕುದಿದು
"ಛೇ ಹಣ ವ್ಯರ್ಥವಾಗಿ ಹೋಯಿತಲ್ಲ"
ಎಂದು ಬಹಳ ನೊಂದರು.
-ಉಫಾಕು-


ಅವನು ಅವಳು
ಎಡೆ ಬಿಡದೆ
ಪ್ರೀತಿಯ ಸೋಗಿನಲ್ಲಿ
ಕದ್ದು ಕದ್ದು
ರಾತ್ರಿ ಹಗಲು ಮಾತಾಡಿದರು.
ಇದ್ದ ಪಾರ್ಕು, ಬೀಚು ಸುತ್ತಾಡಿದರು.
ಇದ ನೋಡಿದ ಯಾರೋ
ಹೆತ್ತವರ ಗಮನಕ್ಕೆ ತರಲು
ಇಬ್ಬರ ಸೇರಿಸಿ
ಮದುವೆ ಮಾಡಿದರು.
ಈಗ ಮಾತಿಲ್ಲ ಕತೆಯಿಲ್ಲ
ಬರೀ ಮೌನ.
-ಉಫಾಕು-

ಸಸಿ ನೆಡೋಕೆ
ಮರ ಬೆಳೆಸೋಕೆ
ಯಾರೂ ಇಲ್ಲ
ಕಲ್ಲು ಹೊಡಿಯೋಕೆ 
ಹಣ್ಣು ತಿನ್ನೋಕೆ
ನೂರಾರು ಜನ
-ಉಫಾಕು-

ಮುನಿಸು ಎಂದರೆ ಸಾವು
ಮನ್ನಿಸು ಅಂದರೆ ಬದುಕು
ದ್ವೇಷವೆಂದರೆ ಹಾವು
ಪ್ರೀತಿಯೆಂದರೆ ಹೂವು
ಇದು ಒಂದೇ ಜನ್ಮ ಕಣೋ
ನಿರಾಳವಾಗಿ ಬದುಕಿ ಬಿಡು
ಮನ ಬಿಚ್ಚಿ ಅತ್ತುಬಿಡು
ಎದೆದುಂಬಿ ನಕ್ಕುಬಿಡು
ಕಪಟದ ಮುಖವಾಡ ಕಳಚಿಕೋ
ಮುಗುಳ್ನಗುವಿನ ಬಾಳು ಕಟ್ಟಿಕೋ
ಬಂದ ದಾರಿಯನೊಮ್ಮೆ ಹಿಂತಿರುಗಿ ನೋಡು
ಕಲಿತ ಪಾಠದ ನೆನಪಿನಲಿ ಮುನ್ನಡಿ ಇಡು

-ಉಫಾಕು-

ಕವಿ ಎಂದರೆ
ಎಲ್ಲಿಂದಲೋ
ಆಕಾಶದಿಂದ
ಕೆಳಗುದುರಿ ಬಿದ್ದವನಲ್ಲ.
ಈ ಮಣ್ಣಲ್ಲೇ
ನಮ್ಮ ನಿಮ್ಮಂತೆ
ಹುಟ್ಟಿ ಬೆಳೆದವ.

ಈ ಮಣ್ಣಿನ ಕಣಕಣದ
ನೋವು ನಲಿವನ್ನು
ತನ್ನ ಕಣ್ಣಲ್ಲಿ ತುಂಬಿಕೊಂಡು
ಅಕ್ಷರಕ್ಕೆ ಭಟ್ಟಿ ಇಳಿಸಿದಾಗ
ಅರ್ಥವಾಗದವರ
ಬಾಯಿಗೆ ಸಿಕ್ಕಿ
ಅರೆ ಹುಚ್ಚನೆಂದೆನಿಸಿಕೊಂಡವ.
ಯಾರೇನೇ ಹೇಳಲಿ
ಕವಿ ಸಾಯಬಹುದು
ಕವಿತೆ ಸಾಯುವುದಿಲ್ಲ.
-ಉಫಾಕು-

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು