ಹುಟ್ಟಿದ ದಿನ : ಜೂನ್ ಒಂದು


ಇವತ್ತು ಮಿತ್ರರಾದ ಇಮ್ರಾನ್ ಏರ್ಮಲ್ ಮತ್ತು ಹಾರಿಸ್ ಅಡ್ಕರವರು ಬರೆದ ಸ್ಟೇಟಸ್ ಓದಿದ ನಂತರ ಇದನ್ನು ಬರೆಯಬೇಕೆನಿಸಿತು. ಕೆಲವು ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಈ ಜನ್ಮ ದಿನಕ್ಕೆ ಈಗಿನಷ್ಟು ಮಹತ್ವ ಇರಲಿಲ್ಲ. ತಮ್ಮ ಮಗ ಮಗಳು ಸ್ವಲ್ಪ ದೊಡ್ಡವರಾಗಿ ಮನೆಯಿಂದ ಶಾಲೆಗೆ ನಡೆದು ಕೊಂಡು ಹೋಗಿ ಬರಲು ಸಮರ್ಥರು ಎಂದು ಅರಿವಾದ ಕೂಡಲೇ ಶಾಲೆಗೇ ಸೇರಿಸುವ ಏರ್ಪಾಟು ನಡೆಯುತ್ತಿತ್ತು .ಶಾಲೆಗೆ ಹೋಗಲು ಒಲ್ಲದ ಮಗ /ಮಗಳಿಗೆ ನಾಲ್ಕು ಭಾರಿಸಿದ ಬಳಿಕ ಆರಂಭವಾದ ಒಡ್ದೋಲಗ ದೊಂದಿಗೆ ಕರೆತರಲಾಗಿ ಹೆಡ್ ಮಾಸ್ತರ ಮುಂದೆ ನಿಲ್ಲಿಸಲಾಗುತ್ತಿತ್ತು.
ಅಪಾದಮಸ್ತಕವಾಗಿ ಮಗುವನ್ನು ನೋಡಿದ ಹೆಡ್ ಮಾಸ್ತರು ಮಗುವಿಗೆ ವಯಸ್ಸು ಎಷ್ಟು? ಎಂದು ಕೇಳಿದಾಗ ತಲೆ ಕೆರೆಯುವ ಸರದಿ ಹೆತ್ತವರದಾಗಿತ್ತು..ಯಾಕೆಂದರೆ ಆಗೆಲ್ಲಾ ಮಕ್ಕಳು ಹುಟ್ಟಿದ ದಿನ ಬರೆದಿಡುವ ಯಾ ಹುಟ್ಟಿದ ದಿನ ಆಚರಿಸುವ ರೂಡಿಯೇ ಇರಲಿಲ್ಲ. ಇದ್ದರೂ ಅದು ಅಪರೂಪ ಅನ್ನಬಹುದಾದಷ್ಟು ವಿರಳವಾಗಿತ್ತು. ಮಗು ಹುಟ್ಟಿದ ದಿನ ಸಮರ್ಪಕವಾಗಿ ನೆನಪಿಗೆ ಬರದೆ ಇದ್ದಾಗ ಸುಮಾರು ಆರು ವರ್ಷದ ಹಿಂದೆ ತಮ್ಮ ಆಸುಪಾಸಿನಲ್ಲಿ ನಡೆದಂತಹ ಕೆಲವು ಘಟನೆಗಳನ್ನು ನೆನಪಿಗೆ ತಂದು ಹೇಳುವ ಮೂಲಕ (ಉಧಾಹರಣೆಗೆ:ಆವತ್ತು ಆ ದೊಡ್ಡ ನೆರೆ ಬಂದು ಕಾರಾಜೆ ಮುಳುಗಿದ ಹಿಂದಿನ ದಿನ,ಆವತ್ತು ಗಲಾಟೆಯಾದ ಊರಜಾತ್ರೆಯ ಮೂರು ದಿನದ ಮೊದಲು / ಕಳೆದ ಸಲದ ಉಲ್ಲಾಳ ಉರೂಸಿಗಿಂತ ಒಂದು ತಿಂಗಳು ಮೊದಲು /ಪಾಣೆ ಮಂಗಳೂರಿನ ನದಿಗೆ ಬಸ್ಸು ಬಿದ್ದ ಹಿಂದಿನ ದಿನ/ಇಂದಿರಾ ಗಾಂಧಿ ತೀರಿ ಹೋದ ಮರುದಿನ ಹೀಗೆ .....) ಹುಟ್ಟಿದ ದಿನಾಂಕವನ್ನು ಅಂದಾಜಿಗೆ ನಿರ್ಧರಿಸಿ ಶಾಲಾ ದಾಖಲಾತಿ ಫಾರಂಗಳಲ್ಲಿ ಬರೆಯಲಾಗುತ್ತಿತ್ತು.
ಅಂಥಹ ಒಂದು ಜೂನ್ ನಲ್ಲಿ ಹುಟ್ಟಿದವರಲ್ಲಿ ನಾನೂ ಒಬ್ಬ .ನನ್ನ ಪ್ರೀತಿಯ ಅಜ್ಜನಿಗೆ ನನ್ನ ಜನ್ಮ ದಿನಾಂಕ ಗೊತ್ತಿಲ್ಲದ ಕಾರಣ ನನ್ನ ಬಲಗೈಯನ್ನು ತಲೆಯ ಮೇಲಿನಿಂದ ತಂದು ಎಡ ಕಿವಿಯನ್ನು ಹಿಡಿಸುವುದರ ಮೂಲಕ ಆರು ವರ್ಷವೆಂದು ತೀರ್ಮಾನಿಸಿ ಶಾಲೆಗೆ ಸೇರಿಸಲಾಗಿದ್ದರೂ ಕೆಲವು ವರ್ಷಗಳ ತರುವಾಯ ಮನೆಯಲ್ಲಿದ್ದ ಹಳೆಯ ಅಲ್ಯೂಮಿನಿಯಂ ಪೆಟ್ಟಿಗೆಯಲ್ಲಿ ಸಿಕ್ಕ ನೋಟ್ ಬುಕ್ ನಲ್ಲಿ ನನ್ನ ನಿಜವಾದ ಹುಟ್ಟಿದ ದಿನಾಂಕ ಗೊತ್ತಾಗಿತ್ತು . ಛೇ,, ಎಲ್ಲಿಯಾದರೂ ಮುಂದೆ ಗವರ್ನಮೆಂಟ್ ಕೆಲಸ ಸಿಕ್ರೆ ಒಂದು ವರ್ಷ ಮೂರು ತಿಂಗಳ ಮೊದಲೇ ರಿಟೈರ್ಡ್ ಆಗಬೇಕಲ್ಲ ಅಂತ ಅಪ್ಪನ ಜತೆ ತುಂಬಾ ಅಲವತ್ತು ಪಟ್ಟುಕೊಂಡಿದ್ದೆ.
ನಂತರದ ದಿನಗಳಲ್ಲಿ ಪದವಿ ಮುಗಿಸಿ ನಾಲ್ಕೈದು ಸ್ಪರ್ದಾತ್ಮಕ ಪರೀಕ್ಷೆ ಬರೆದು,ಸರಕಾರೀ ಕೆಲಸದ ಆಸೆ ಬಿಟ್ಟು,ವಿದೇಶಿ ಕಂಪನಿಗೆ ಸೇರಿ ಅಡ್ಮಿನ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತಿದ್ದಾಗ ನಮ್ಮ ಅಕ್ಕಪಕ್ಕದ ದೇಶದ ಜೊತೆಗೆ ನಮ್ಮ ದೇಶದ ವಿವಿದ ರಾಜ್ಯದವರ ಪಾಸು ಪೋರ್ಟ್ ಕೈಗೆ ಬರುತಿತ್ತು. ಆಗ ಹೆಚ್ಚಿನವರ ಹುಟ್ಟಿದ ದಿನಾಂಕಗಳು ಯಾವುದಾದರೊಂದು ತಿಂಗಳ ಮೊದಲ ದಿನಾಂಕವಾಗಿದ್ದು ವಿಶೇಷವಾಗಿ ನನ್ನ ಗಮನ ಸೆಳೆದು ಅವರಿಗೂ ನನ್ನಂತ ಹಿನ್ನೆಲೆ ಇರಬಹುದೆಂದು ಊಹಿಸಿ ಮನದಲ್ಲೇ ನಕ್ಕಿದ್ದೆ.
ಏನೇ ಇರಲಿ ಜೂನ್ ಒಂದರಂದು ಹುಟ್ಟಿದ ಯಾ ಹುಟ್ಟದ ಎಲ್ಲರಿಗೂ ಸ್ಪೆಷಲ್ ಶುಭಾಶಯಗಳು
# ಫಾರೂಖ್ ಕುಕ್ಕಾಜೆ#
ufaku.blogspot.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು