ಪ್ರವಾಸಿ




ಹೌದು, ನಾನು ಪ್ರವಾಸಿ
ಜವಾಬ್ದಾರಿಗಳ ಗಂಟುಗಳನ್ನು 
ಹೊತ್ತು ತಂದ ಪೆಟ್ಟಿಗೆಯಲ್ಲಿ
ಕನಸುಗಳನ್ನು ತುಂಬುವವನು. 
ಕನಸುಗಳನ್ನು ತುಂಬಿ ತುಂಬಿ
ನನಸಾಗಿಸಲು ಒದ್ದಾಡಿ ಒದ್ದಾಡಿ
ಇರುವ ಒಂದೇ ಬದುಕು ಮುಗಿಸಿ
ಶವ ಮಂಚಕ್ಕೆ ಹತ್ತಿರವಾಗುವವನು.
ಇಂದಲ್ಲ ನಾಳೆ ಬಂದೇ ಬರುವನು
ನನ್ನೊಡನೆ ಸೇರಿ ಇಲ್ಲೇ ಇರುವನು
ಎಂದು ಕಾದು ಕೂತ ಕಣ್ಣುಗಳಿಗೆ
ಮರಣ ದಂಡನೆ ವಿಧಿಸಿದವನು.
ಬಿಡುವಿರದ ಕೆಲಸದ ಗೊಡವೆ
ನಿದ್ದೆ ಬರದ ಇರುಳಿನ ನಡುವೆ
ಊರವರ ನೆನಪಿಸಿಕೊಂಡರೂ
ಅವರ ಮನದಲ್ಲಿ ಮರೆತವನು .
ನಿರೀಕ್ಷೆಗಳು ಹುಸಿಯಾದಾಗ 
ದುಃಖ ದುಮ್ಮಾನ ಸಹಿಸಲಾಗದೆ
ನಿರಾಸೆ ಹತಾಷೆಗೊಳಗಾಗಿ
ಯಾರೂ ಕಾಣದಂತೆ ಅಳುವವನು. 
ಹೌದು, ನಾನು ಪ್ರವಾಸಿ
ಅಲ್ಲಿ ನಿಲ್ಲಲಾಗದೆ ಇಲ್ಲಿ ಇರಲಾಗದೆ
ತನ್ನವರ ಬದುಕಿಗಾಗಿ ಜೀವ ಸವೆಸಿ
ಅವರ ಕುಶಿಯಲ್ಲಿಯೇ ತ್ರಪ್ತಿ ಪಟ್ಟವನು.


ಫಾರೂಖ್ ಕುಕ್ಕಾಜೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು