
ನನ್ನ ಪ್ರವಾದಿ ನನಗೆ
ಕೇವಲ ಭಾಷಣವಲ್ಲ
ಕತೆ,ಕವನವೂ ಅಲ್ಲ.
ಲೇಖನ,ಗಾಯನವಲ್ಲ.
ಹಸಿದ ಹೊಟ್ಟೆಗೆ ಉಣ ಬಡಿಸಿರಿ
ಎಂದು ಪ್ಲೆಕ್ಸ್ ನಲ್ಲಿ ಬರೆಯಲಾಗಿತ್ತು.
ಅಷ್ಟು ದೊಡ್ಡ ಪ್ಲೆಕ್ಸ್ ಗೆ ಖರ್ಚಾದ ಹಣದಲ್ಲಿ
ಹತ್ತು ಹೊಟ್ಟೆಯನ್ನು ತಣಿಸಬಹುದಾಗಿತ್ತು.
ಕೋಪವನ್ನು ನಿಗ್ರಹಿಸುವವನೇ ಬಲಶಾಲಿ
ಎಂದು ಆ ಬ್ಯಾನರ್ ನಲ್ಲಿ ಬರೆಯಲಾಗಿತ್ತು.
ಕುಡಿದ ಅಮಲಿನಲ್ಲಿ ಬ್ಯಾನರ್ ಹರಿದವನಿಗೆ
ಕೋಪದಿಂದ ಹಿಗ್ಗಾಮುಗ್ಗಾ ಥಳಿಸಲಾಗಿತ್ತು.
ಬೆವರು ಆರಿ ಹೋಗುವ ಮುನ್ನ
ಕಾರ್ಮಿಕನ ಕೂಲಿ ಕೊಟ್ಟು ಬಿಡಿ
ಎಂಬ ವಚನ ಬರೆಯಲಾಗಿತ್ತು.
ಸಂಬಳ ಕೊಡದೆ ಸತಾಯಿಸಿದ
ಹೆಸರಾಂತ ಗುತ್ತಿಗೆದಾರರೊಬ್ಬರ
ಜಾಹಿರಾತು ಆ ಬ್ಯಾನರ್ ನಲ್ಲಿ ಇತ್ತು
ಭೂಮಿಯ ಮೇಲೆ ಸ್ನೇಹಕ್ಕೆ
ತಮ್ಮ ಅಂತಸ್ತಿನವರನ್ನೇ ಹುಡುಕುತ್ತಾರೆ
ಭೂಮಿಯ ಕೆಳಗೆ ಕಬರ್ ಗೆ
ಅಂತಸ್ತು ಇಲ್ಲ ಎಂಬುದ ಮರೆಯುತ್ತಾರೆ.
ಮದ್ಯಪಾನವು ಸರ್ವ ನಾಶಗಳ ಕೀಲಿ ಕೈ
ಎಂದು ಶಾಲೆಯ ಗೋಡೆಯಲ್ಲಿ ಬರೆಯಲಾಗಿತ್ತು.
ಶಾಲಾ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ
ನಗರದ ಬಾರ್ ಮಾಲಿಕರನ್ನು ಕರೆಯಲಾಗಿತ್ತು.
ರಸ್ತೆಯ ತಡೆ ನೀಗಿಸೋ
ಜೀವನ ಕ್ರಮ ಕಲಿಸಲಾಗಿತ್ತು.
ರಸ್ತೆಗೆ ಅಡಚಣೆ ಮಾಡಿ
ಮಹಾ ಜಾಥಾ ಹೊರಟಿತ್ತು.
ಕಾನ್ಫರೆನ್ಸ್ ಹಾಲ್ ನಲ್ಲಿ "ಬಡ್ಡಿ ನಿಷಿದ್ದ"
ಎಂಬ ಬಗ್ಗೆ ಸಂವಾದ ನಡೆಯುತ್ತಿತ್ತು .
"4 % ಬಡ್ಡಿಗೆ ಕಾರು" ಎಂಬ ಕರಪತ್ರಿಕೆ
ಹಾಲ್ ನ ಹೊರಗಡೆ ನೀಡಲಾಗುತ್ತಿತ್ತು.
'ಭೂಮಿಯ ಮೇಲೆ ಕ್ಷೋಭೆ ಹರಡದಿರಿ
ನೀವೆಲ್ಲ ಪರಸ್ಪರ ಸಹೋದರರು"
ಎಂದು ಆ ಸೌಹಾರ್ದ ಸಭೆಯಲ್ಲಿ ಹೇಳಲಾಯಿತು
ಸಭೆಯ ನಂತರ ದ್ವಜದ ವಿಷಯದಲ್ಲಿ ಜಗಳವಾಗಿ
ಆರು ಜನರನ್ನು ಆಸ್ಪತ್ರೆಗೆ ಸೇರಿಸಲಾಯಿತು.
ಕೋರ್ಟು ಕಚೇರಿ ಅಲೆಯಬೇಕಾಯಿತು.
0 ಕಾಮೆಂಟ್‌ಗಳು