ಈದ್ ಮತ್ತು ಉಪವಾಸ - ಹಳೆಯ ನೆನಪು

ಅದೊಂದು ಕಾಲವಿತ್ತು. ಆಗ ಕರೆಂಟ್ ಇರಲಿಲ್ಲ , ಈಗಿನಂತೆ ತಂತ್ರಜ್ಞಾನಗಳು ಬೆಳೆದಿರಲಿಲ್ಲ. ಇರುಳು ಸೀಳಿ ಬರುವ ಅತ್ತಾಲಕ್ಕೆ ಕಾದರ್ ಕಾಕ ಡಬ್ಬ ಬಾರಿಸ್ತ ಬಂದು ಎಬ್ಬಿಸುತ್ತಿದ್ದರು. ಗಂಜಿ ಮೇಲೆ ಮೊಸರು ಹಾಕಿ, ಮಾವಿನ ಉಪ್ಪಿನಕಾಯಿ ಮೆಲ್ಲುತ್ತಾ , ಪಪ್ಪಡ ದೊಂದಿಗೆ ಅತ್ತಾಳ ಮುಗಿಯುತ್ತಿತ್ತು . ದೂರದ ಮಸೀದಿಯಿಂದ ಕೇಳಿ ಬರುತ್ತಿದ್ದ ಪರಿಚಯದ ಮುಕ್ರಿಕ ರವರ ಆದಾನ್ ನೊಂದಿಗೆ ಸುಬಹ್ ನಮಾಜ್ ಮುಗಿಸಿ ನಿದ್ದೆಗೆ ಜಾರುತ್ತಿದ್ದೆವು.

ಬೆಳಗ್ಗೆ ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ಶಾಲೆಗೆ ಹೊರಟೆವೆಂದರೆ, ಮದ್ಯಾಹ್ನದ ಬಿಡುವಿಗೆ , ಸುರಿಯುವ ಮಳೆಗೆ ಮನೆಗೆ ಬಾರದೆ ಪಕ್ಕದಲ್ಲೇ ಇದ್ದ ಮಸೀದಿಯಲ್ಲಿ ಲುಹುರ್ ಮುಗಿಸಿ , ಒಂದು ಕೋಳಿ ನಿದ್ದೆ ಹೊಡೆದು ಮತ್ತೆ ಕ್ಲಾಸಿಗೆ ಹಾಜರ್. ಆಗ ನಾವೆಲ್ಲ ಓರಗೆಯವರು "ಹೇ ನೀನೆಷ್ಟು ಉಪವಾಸ ಹಿಡಿದಿ ?" ಎಂದು ಪರಸ್ಪರ ಹಿಡಿದ ಉಪವಾಸದ ಲೆಕ್ಕ ಹಾಕಿದಾಗ ಹೆಚ್ಚು ಉಪವಾಸ ಹಿಡಿದವರಿಗೆ ಕೋಡು ಮೂಡುತ್ತಿತ್ತು.


ಸಂಜೆಯ ಆಟದ ನಂತರ ಮನೆಯ ಕಡೆಗೆ ಹೊರಟು, ಸ್ನಾನ ಮಾಡಿ ಅಸರ್ ನಮಾಜ್ ಮುಗಿಸಿದಾಗ ನಮ್ಮ ಮನೆಯದ್ದೋ ಯಾ ಪಕ್ಕದ ಇಬ್ರಾಹಿಂ ಕಾಕ ಯಾ ಆಮೀನ ದಾದಾ ಅವರ ಮನೆಯಲ್ಲಿ ತೆಂಗಿನ ರಸ/ಹೆಸ್ರುನಿಂದ ಮಾಡಿದ ಗಂಜಿ ರೆಡಿ ಆಗುತ್ತಿತ್ತು.ಅದನ್ನು ಹೊತ್ತುಕೊಂಡು ನಮ್ಮ ಗೆಳೆಯರ ಪಟಾಲಂ ಮಸೀದಿಯ ಹಾದಿ ಹಿಡಿಯುತ್ತಿತ್ತು.ಬೇರೆ ಬೇರೆ ಮನೆಗಳಿಂದ ಬಂದ ಬಗೆ ಬಗೆಯ ಗಂಜಿ ಮಸೀದಿಯ ಪಾತ್ರೆಯಲ್ಲಿ ಮಿಕ್ಸ್ ಆಗಿ ಅದರ ಸವಿಯೇ ಬೇರೆ ಆಗುತ್ತಿತ್ತು.ಬಗೆ ಬಗೆಯ ಕಾರಕ್ಕೆ, ಈತಪಳ (ಖರ್ಜೂರ ), ಕೆಲವು ಬಗೆಯ ಅಪ್ಪಂಗಳಿಂದ ನಮ್ಮ ಹೊಟ್ಟೆ ತುಂಬುತ್ತಿತ್ತು.ಆಗೆಲ್ಲ ನಮಗೆ 30 ದಿನದ ಉಪವಾಸದಲ್ಲಿ ಸಿಗುತ್ತಿದ್ದ ಬಗೆ ಬಗೆಯ ತಿಂಡಿ ತಿನ್ನುವ ಭಾಗ್ಯ ಇಡೀ ವರ್ಷದಲ್ಲಿಯೇ ಸಿಗುತ್ತಿರಲಿಲ್ಲ. 


ಇಫ್ತಾರ್ ನ ನಂತರ ನಮಾಜ್ ಮುಗಿಸಿ ಗಂಜಿ ಪಾತ್ರೆಯನ್ನು ತಿರುಗಿ ಹೊತ್ತು ಕೊಂಡು ಬಂದು ಮನೆಗೆ ತಲುಪಿಸಿ ಅಮ್ಮ ಕೊಟ್ಟ ಬಿಸಿ ಬಿಸಿ ತಿಂಡಿ ತಿಂದು ತೇಗು ಬಿಡುವ ಹೊತ್ತಿಗೆ "ತರವೀಹ್ ಗೆ ರೆಡಿ ಆಗು" ಎಂಬ ಫರ್ಮಾನು ಅಪ್ಪ ಹೊರಡಿಸುತ್ತಿದ್ದರು. ಒಲ್ಲದ ಮನಸ್ಸಿನಿಂದಲೇ ಹೊರಟ ನನಗೆ ಕುಂಞಮೊನಾಕನ ಅಂಗಡಿಯಿಂದ ಎಳ್ಳು ಜ್ಯೂಸು ಮತ್ತು ದಾಡಿ ಬಾಬಣ್ಣನನ ಗೂಡಂಗಡಿಯ ಮೈಸೂರ್ ಬಾಳೆಹಣ್ಣು ತೆಗೆಸಿ ಕೊಟ್ಟು ಅಪ್ಪ ನನ್ನ ಉತ್ಶಾಹವನ್ನು ಹೆಚ್ಚಿಸುತ್ತಿದರು. 29 ಅಥವಾ 30 ದಿನಗಳ ರಂಜಾನ್ ದಿನಚರಿಯಲ್ಲಿ ತರಾವೀಹ್ ನಂತರ ನಡೆಯುವ ಉಸ್ತಾದರ ಪ್ರವಚನ ನನಗೆ ಬಹಳ ಆಶಕ್ತಿದಾಯಕವಾಗಿತ್ತು. ಅರ್ಧ ಗಂಟೆಯ ಆ ಪ್ರವಚನದಲ್ಲಿ ಪ್ರಧಾನರಾದ 25 ಪ್ರವಾದಿಯವರ ಸಂಕ್ಷಿಪ್ತ ಚರಿತ್ರೆ, ಬದರ್, ಉಹುದ್ ,ಖಂದಕ್,ಖೈಬರ್ ಚರಿತ್ರೆ ,ಲೈಲತುಲ್ ಕದ್ರ್, ಹೀಗೆ ವಿಷಯಗಳನ್ನು ಪರಿಣಾಮಕಾರಿಯಾಗಿ ಮನಮುಟ್ಟುವಂತೆ ಮಂಡಿಸುತ್ತಿದ್ದರು. 29 ಉಪವಾಸ ಮುಗಿದ ಕೂಡಲೇ ಚಂದ್ರ ಕಾಣಲೇ ಬೇಕೆಂಬ ಹಠದಿಂದ 11 ಗಂಟೆ ರಾತ್ರಿಯವರೆಗೂ ಈದ್ ಘೋಷಣೆಯ ತಕ್ಬೀರ್ ಗಾಗಿ ಕಾದು ಕಾದು ನಿರಾಸೆಯಾಗಿ ಮಲಗಿದ್ದೂ ಇದೆ.ನಂತರ ಹಾಗೆಯೇ ರಂಜಾನ್ ಮಾಸ ಮುಗಿದದ್ದೇ ಗೊತ್ತಾಗದಂತೆ ಈದ್ ಸಂಭ್ರಮದಲ್ಲಿ ಲೀನವಾಗುತ್ತಿದ್ದೆವು.



ಈ ವರ್ಷದಂತೆ ಆಗ ಮಳೆಗಾಲದಲ್ಲಿ ಈದ್ ಬರುತ್ತಿತ್ತು . ಬಂಧುಗಳ, ಹಿರಿಯರ ಪೆರ್ನಾಲ್ ಕಾಣಿಕೆ ನಮ್ಮ ಕಿಸೆ ತುಂಬುತ್ತಿದ್ದವು. ಇಡ್ಲಿ ,ಕೋಳಿ ಕರಿ ಮತ್ತು ಸೀರ್ ಕುರ್ಮಾದ ಸುವಾಸನೆ ನಮ್ಮ ಮೋಹಲ್ಲಾದ ಪರಿಸರದಲ್ಲಿ ಘಮಘಮಿಸುತ್ತಿತ್ತು . ಧೋ.. ಎಂದು ಬಿಡದೆ ಸುರಿಯುತ್ತಿರುವ ಮಳೆಯ ನಡುವೆ ,ನಮ್ಮ ಮರಿ ಸೈನ್ಯವನ್ನು ಸಂಭಂದಿಕರ ಮನೆಗೆ ಸುತ್ತಾಡಿಸಲು ಮಾಮನ ರಿಕ್ಷಾ ನಮ್ಮ ಮನೆಯ ಅಂಗಳದಲ್ಲಿ ರೆಡಿ ಆಗಿ ಬಂದು ನಿಂತಿತೆಂದರೆ ನಮಗೆ ಸ್ವರ್ಗಕ್ಕೆ ಮೂರೇ ಗೇಣು ..


ಈಗ ಅವೆಲ್ಲವೂ ಮಸುಕು ಮಸುಕು ನೆನಪು. ಬಿಸಿಲ ಬೇಗೆಗೆ ಬಸವಳಿದು ಹೋಗುವ ಈ ಅರಬ್ ನಾಡಿನ ಮರುಭೂಮಿಯಲ್ಲಿ ಆ ನೆನಪುಗಳು ಮನಸ್ಸಿನ ತುಂಬಾ ತಂಪು ತಂಪು ..




ಸರ್ವರಿಗೂ ಶುಭಾಶಯಗಳು


ಫಾರೂಖ್ ಕುಕ್ಕಾಜೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು