ಪ್ರತಿ ಬಿಂಬ


ನನ್ನ ತಂದೆ ತಾಯಿ ಮದುವೆಯಾಗಿ 55 ವರ್ಷಗಳು ಈಗಾಗಲೇ  ಕಳೆದಿತ್ತು. ಒಂದು ದಿನ ಬೆಳಿಗ್ಗೆ, ನನ್ನ ತಾಯಿ ಅಪ್ಪನಿಗೆ ತಿಂಡಿ ಮಾಡಲು ಅಡುಗೆ ಕೋಣೆಗೆ  ಹೋದವಳು ದೊಪ್ಪನೆ ಹೃದಯಾಘಾತವಾಗಿ ಬಿದ್ದಳು. ವೆರಾಂಡದಲ್ಲಿ ಕುಳಿತಿದ್ದ ನನ್ನ ತಂದೆ ಓಡಿ  ಬಂದು ಅವಳನ್ನುಎತ್ತಿಕೊಂಡು ನಮ್ಮ ಮನೆಯ ಚಿಕ್ಕ  ವ್ಯಾನ್ ನ ಒಳಗೆ ಮಲಗಿಸಿ ಆಸ್ಪತ್ರೆಯ ಕಡೆಗೆ ಗಾಡಿ ಓಡಿಸತೊಡಗಿದರು . ರಸ್ತೆಯ ಯಾವ  ಟ್ರಾಫಿಕ್ ದೀಪಗಳ ಸಿಗ್ನಲ್  ಗೌರವಿಸದೆ, ನೇರವಾಗಿ ವೇಗವಾಗಿ ವ್ಯಾನ್ ಓಡಿಸಿ ತಾಯಿಯನ್ನು ಆಸ್ಪತ್ರೆಗೆ ಸೇರಿಸಿದರು.

ಆದರೆ ದುರದೃಷ್ಟವಶಾತ್, ನಮ್ಮ ತಾಯಿ ಬದುಕಿ ಬರಲಿಲ್ಲ. ನಾವೆಲ್ಲ ಅಂದು  ಅತ್ತು ಅತ್ತು ಬಸವಳಿದಿದ್ದರೂ ನನ್ನ ಅಪ್ಪ ಅಳಲಿಲ್ಲ. ಅಂತ್ಯಕ್ರಿಯೆಯ ಸಮಯದಲ್ಲಿಯೋ , ಸಮಾದಿ  ಮಾಡಿ ಬಂದ ಮೇಲೆಯೋ  ನನ್ನ ಅಪ್ಪ ಒಂದಕ್ಷರ  ಮಾತನಾಡಲಿಲ್ಲ. 

 ಅವನ ನೋಟದ ಖುಷಿ  ಕಳೆದು ಹೋಗಿತ್ತು.  ಆದರೂ ಅವನು ಅಷ್ಟೇನೂ ಅಳಲಿಲ್ಲ. ಅದೇ ದಿನ  ರಾತ್ರಿ ನಾವು  ಮಕ್ಕಳೆಲ್ಲಾ ಸಾವಿನ ನೋವು ಮತ್ತು ತಾಯಿಯನ್ನು ಕಳೆದುಕೊಂಡ ವಿರಹದ ವಾತಾವರಣದಲ್ಲಿ ಇದ್ದೆವು . ದೇವರ ಸ್ತುತಿಗಾನ ಮಾಡಿ ಅಮ್ಮನ ಮೋಕ್ಷಕ್ಕಾಗಿ ಪ್ರಾರ್ಥಿಸುತ್ತಿದೆವು. ಆಗ ಅಲ್ಲಿಯೇ ಮನೆಯ ಮೂಲೆಯಲ್ಲಿ ಕುಳಿತಿದ್ದ ಅಪ್ಪ ತಟ್ಟನೆ ಎಚ್ಚರಗೊಂಡವನಂತೆ ಎದ್ದು ನಿಂತು  ಕೂಡಲೇ ಧರ್ಮ ಗುರುಗಳನ್ನು ಮನೆಗೆ ಕರೆದುಕೊಂಡು ಬರುವಂತೆ ಅಣ್ಣನಿಗೆ ಹೇಳಿದರು.  ನಾವು ಈ ವರೆಗೆ  ಕಂಡಂತೆ ತಾಯಿ ಮಹಾ  ಧರ್ಮ ಭಕ್ತೆ.  ಆದರೆ ನಮ್ಮ ಅಪ್ಪ ಒಮ್ಮೆಯೂ  ಚರ್ಚ್ ಗೆ ಹೋದದ್ದು ನಾವು ಕಂಡಿರಲಿಲ್ಲ. 

ನನ್ನ ಅಣ್ಣ  ಧರ್ಮ ಗುರುಗಳನ್ನು ಕರೆದುಕೊಂಡ ಬಂದಾಗ  ಅವರು ಪ್ರಾರ್ಥನೆ ಮಾಡಿ   ಆ ಕ್ಷಣದಲ್ಲಿ ನಮ್ಮ ತಾಯಿ ಎಲ್ಲಿರುತ್ತಾರೆ ಎಂದು ಹೇಳುತ್ತಾ ಸಾವಿನ ನಂತರದ ಜೀವನದ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ನನ್ನ ಅಪ್ಪ ಧರ್ಮ ಗುರುಗಳ ಮಾತುಗಳನ್ನು  ಎಚ್ಚರಿಕೆಯಿಂದ ಆಲಿಸುತ್ತಾರೆ.   ಮತ್ತು ಅಮ್ಮ ಈಗ  ದೇವಲೋಕದಲ್ಲಿ ಹೇಗೆ ಮತ್ತು ಎಲ್ಲಿದ್ದಾಳೆ ಎಂದು ಧರ್ಮ ಗುರುಗಳ ಮಾತಿನ ಮೂಲಕ ಗ್ರಹಿಸುತ್ತಿದ್ದ ಅಪ್ಪ ಇದ್ದಕ್ಕಿದ್ದಂತೆ ''ನಾವು ಈ ಕೂಡಲೇ  ಸ್ಮಶಾನಕ್ಕೆ ಹೋಗೋಣ'' ಎಂದು  ಹೇಳಿದರು.

 ಅಪ್ಪಾ!" , " ಈಗ ರಾತ್ರಿ 12 ಆಗಿದೆ, ನಾವು ಈಗ ಸ್ಮಶಾನಕ್ಕೆ ಹೋಗಲಾರೆವು!" ಎಂದು ನಾವು ಉತ್ತರಿಸಿದೆವು

 ಆದರೆ ಅವನು ತನ್ನ ಧ್ವನಿಯನ್ನು ಹೆಚ್ಚಿಸಿ, ಕಣ್ಣಿನ ನ ನೋಟವನ್ನು ತೀಕ್ಷ್ಣವಾಗಿಸಿ 

 "ನನ್ನೊಂದಿಗೆ ವಾದ ಮಾಡಬೇಡಿ, 55 ವರ್ಷಗಳ ಹೆಂಡತಿಯನ್ನು ಕಳೆದುಕೊಂಡ ವ್ಯಕ್ತಿಯೊಂದಿಗೆ ದಯವಿಟ್ಟು ವಾದಿಸಬೇಡಿ." ಎಂದು ಜೋರಾಗಿ ಹೇಳಿದನು.

 ಆಗ ಒಂದು ಕ್ಷಣ ನಮ್ಮ ನಡುವೆ ಗೌರವಯುತ ಮೌನ ಆವರಿಸಿತ್ತ.  ನಾವು ಆಮೇಲೆ   ವಾದಿಸಲಿಲ್ಲ. ನಾವು ಅಪ್ಪನನ್ನು  ಕರೆದುಕೊಂಡು ಸ್ಮಶಾನಕ್ಕೆ ಹೋದೆವು.  ಅಲ್ಲಿ  ಸ್ಮಶಾನದ ರಾತ್ರಿ ಕಾವಲುಗಾರನ  ಅನುಮತಿ ಕೇಳಿ ಬ್ಯಾಟರಿಯ   ಬೆಳಕು ಚೆಲ್ಲುತ್ತಾ   ಸಮಾಧಿಯ  ಬಳಿ ತಲುಪಿದೆವು. 


ನನ್ನ ಅಪ್ಪ ಅಲ್ಲಿಯೇ ಬಾಗಿ  ಅಮ್ಮನ ಸಮಾದಿಯ ಮೇಲೆ  ಮುತ್ತು ಕೊಟ್ಟರು , ನಮಗೆ  ತಿಳಿಯದ ಕ್ಷೀಣ ಸ್ವರದಲ್ಲಿ ಗುನುಗುನಿಸುತ್ತಾ  ಪ್ರಾರ್ಥಿಸಿದರು.

 ನಂತರ  ಅವರ ಮಕ್ಕಳಾದ ನಮ್ಮ ಕಡೆಗೆ ಪಕ್ಕನೆ ತಿರುಗಿ

 "ಇದು 55 ವರ್ಷಗಳು ... ನಿಮಗೆ ತಿಳಿದಿದೆಯೇ? ಒಬ್ಬ ಮಹಿಳೆಯೊಂದಿಗೆ ಜೀವನವನ್ನು ಹಂಚಿಕೊಳ್ಳುವುದು ಹೇಗೆ?  ಎಂದು ನಿಮಗೆ ತಿಳಿದಿಲ್ಲದಿದ್ದರೆ ನಿಜವಾದ ಪ್ರೀತಿಯ ಬಗ್ಗೆ ನಿಮಗೆ ತಿಳಿದಿಲ್ಲ. ನೀವು ಅರಿತಿಲ್ಲ ." ಎಂದು ಮಾತು ನಿಲ್ಲಿಸಿ ಮೌನವಾದ .



ಸ್ವಲ್ಪ  ನಂತರ  ಮುಖ ಒರೆಸಿಕೊಂಡ. "ನಿಮಗೆ ಗೊತ್ತಾ ?  ನಿಮ್ಮ ತಾಯಿ  ಮತ್ತು ನಾನು, ಎಲ್ಲಾ ಕಾಲದ  ಬಿಕ್ಕಟ್ಟಿನಲ್ಲಿಯೂ  ಒಟ್ಟಿಗೆ ಇದ್ದೆವು. ನಾನು ಅನೇಕ ಸಲ ಉದ್ಯೋಗವನ್ನು ಬದಲಾಯಿಸಿದೆ ..ಮನೆ ಬದಲಾಯಿಸಿದೆ ..ಜಾಗ ಬದಲಾಯಿಸಿದೆ ." ಅವರು ಮಾತು ಮುಂದುವರಿಸಿದರು. 

ನಾವು ಮನೆ ಮಾರಿ ಊರಾಚೆ ಹೋದಾಗ ನಾವಿಬ್ಬರು  ಎಲ್ಲವನ್ನೂ  ಪ್ಯಾಕ್ ಮಾಡಿದೆವು, ನಮ್ಮ ಮಕ್ಕಳು ದೊಡ್ಡವರಾಗುವುದನ್ನು ಅವರು ಕಲಿಯುವುದನ್ನುನಮ್ಮ  ವೃತ್ತಿಜೀವನವನ್ನು ಮುಗಿಸಿದ ಸಂತೋಷವನ್ನು ನಾವು ಜೊತೆಯಾಗಿ  ಹಂಚಿಕೊಂಡೆವು.  ನಾವು ನಮ್ಮ ಕುಟುಂಬದ ಪ್ರೀತಿಪಾತ್ರರ ನಿರ್ಗಮನವನ್ನು ಅಕ್ಕಪಕ್ಕದಲ್ಲಿದ್ದು  ನೋಡಿದ್ದೇವೆ. ನಾವು ಕೆಲವು ಆಸ್ಪತ್ರೆಗಳ ಕಾಯುವ ಕೋಣೆಯಲ್ಲಿಒಟ್ಟಾಗಿ ಕುಳಿತ್ತಿದ್ದೇವೆ.  ನಾನು ಮತ್ತು ಅವಳು ನಿಮ್ಮ ಹೆರಿಗೆಗಾಗಿ , ನಿಮ್ಮ ಆರೋಗ್ಯಕ್ಕಾಗಿ ಒಟ್ಟಿಗೆ ಪ್ರಾರ್ಥಿಸಿದ್ದೇವೆ.  ನಾವು ನೋವಿನಲ್ಲಿ ಒಬ್ಬರನ್ನೊಬ್ಬರು ಬೆಂಬಲಿಸಿದ್ದೇವೆ , ನಾವು ಪ್ರತಿ ಕ್ರಿಸ್ಮಸ್ ನಲ್ಲಿಯೂ  ಸಂತೋಷದಿಂದ ತಬ್ಬಿಕೊಳ್ಳುತ್ತಿದ್ದೆವು   ಮತ್ತು ನಾವು ನಮ್ಮ ತಪ್ಪುಗಳನ್ನು ಪರಸ್ಪರ   ಕ್ಷಮಿಸುತ್ತಿದ್ದೆವು.    ಈಗ ಅವಳಿಲ್ಲ . ಅವಳಿಲ್ಲದ ನಾನು ಇರುವುದು ಹೇಗೆ ?"

 "ಮಕ್ಕಳೇ, ಈಗ ಅವಳು ಹೋಗಿದ್ದಾಳೆ  ಮತ್ತು ನಾನು ಈಗಲೂ ಸಂತೋಷವಾಗಿದ್ದೇನೆ, ಏಕೆ ಎಂದು ನಿಮಗೆ ತಿಳಿದಿದೆಯೇ? ಯಾಕೆಂದರೆ ಅವಳು ನನಗಿಂತ ಮೊದಲೇ ಹೊರಟು ಹೋದಳು. ನನ್ನ ನಿರ್ಗಮನದ ನಂತರ ಅವಳು ನನ್ನನ್ನು ಸಮಾಧಿ ಮಾಡುವ ಸಂಕಟ ಮತ್ತು ನೋವನ್ನು ಅವಳು  ಅನುಭವಿಸಬೇಕಾಗಿಲ್ಲ. ನಾನು ಅವಳ ನೋವು ನೋಡದೆ  ಹೋಗುತ್ತೇನೆ ಮತ್ತು ನಾನು ಅದಕ್ಕಾಗಿ ಈ ವರೆಗೆ ನಂಬದ ದೇವರಿಗೆ ಧನ್ಯವಾದ ಹೇಳುತ್ತೇನೆ. ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ಅವಳು ಬಳಲುತ್ತಿರುವುದನ್ನು ಕಾಣುವುದು ನಾನು ಇಷ್ಟಪಡುತ್ತಿರಲಿಲ್ಲ ... "  ಹೀಗೆ ಮಾತುಗಳು ಸಾಗುತ್ತಲೇ ಇತ್ತು.

 ನನ್ನ ತಂದೆ ಮಾತು ಮುಗಿಸಿದಾಗ, ನನ್ನ ಸಹೋದರರು ಮತ್ತು ನನ್ನ ಮುಖದಲ್ಲಿ ಕಣ್ಣೀರು ಹರಿಯಿತು. ನಾವು ಅವನನ್ನು ತಬ್ಬಿಕೊಂಡೆವು.  "ಅಪ್ಪಾ ಪರವಾಗಿಲ್ಲ, ನಾವು ಮನೆಗೆ ಹೋಗೋಣ , ಅಮ್ಮನಿಗೆ ನಿಮ್ಮ ಶೋಕ ನೋಡಲು ಸಾಧ್ಯವಾಗದು " ಎಂದು ಸಮಾಧಾನಪಡಿಸಿದೆವು.


ಆ ರಾತ್ರಿ ನನಗೆ ನಿಜವಾದ ಪ್ರೀತಿ ಏನೆಂದು ಅರ್ಥವಾಯಿತು. ಈ ಪ್ರೀತಿಯೆಂದರೆ ಬರೀ ಪ್ರಣಯವಲ್ಲ , ಪ್ರೀತಿ  ಎಂಬುದು ಕಾಮ ತೃಷೆಯೂ   ಅಲ್ಲ  ಅಥವಾ ಲೈಂಗಿಕ ಸಂಬಂಧ ವೂ ಅಲ್ಲ.  ಬದಲಿಗೆ ಇದು ಪರಸ್ಪರ ನಂಬಿಕೆ ,  ಕೆಲಸ, ಪೂರಕತೆ, ಕಾಳಜಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನೈಜ ಬದುಕು ಸಾಗಿಸಲು  ಬದ್ಧತೆಯುಳ್ಳ ಇಬ್ಬರು ವ್ಯಕ್ತಿಗಳ ನಡುವಿನ ಬಿಡಿಸಲಾಗದ  ಅನುಬಂಧ.  ನೆಮ್ಮದಿಯ ಸಹಬಾಳ್ವೆಯ ಬದುಕನ್ನು ಪ್ರತಿಪಾದಿಸುವ  ಸಿದ್ದಾಂತವೇ ದಾಂಪತ್ಯ ಎಂದು ನಾನು ಅಂದು ಅರಿತುಕೊಂಡೆ.   ಹೌದು ಪ್ರೀತಿ ಅನುಭವಿಸಿದವರಿಗೆ ಮಾತ್ರ ಅದರ ನೋವು ನಲಿವು ಅರ್ಥವಾಗಬಲ್ಲದು.

ನಿಮ್ಮ ಹೃದಯದಲ್ಲಿಯೂ  ಪ್ರೀತಿಯ ಬೆಳಕು ಮೂಡಲಿ.

ಮೂಲ :  ಗೈಆ  ಅಥೆನ್ಸ್   

ಅನುವಾದ : ಉಫಾಕು 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು