ಬರಹ : ಉಫಾಕು ಚಿತ್ರ : ಸಾಂದರ್ಭಿಕ
ಕೆಲವು ಜೀವಗಳು ದೀರ್ಘಕಾಲ ಬದುಕುವುದಿಲ್ಲ. ಆದರೆ ಅವರು ಬಿಟ್ಟುಹೋಗುವ ನೆನಪುಗಳು ಕಾಲದ ಅಂತ್ಯದವರೆಗೂ ಬದುಕುತ್ತವೆ. ನನ್ನ ಬಾಲ್ಯದ ಗೆಳೆಯ ಅಝೀಜ್ ಅಂತಹ ಅಪರೂಪದ ವ್ಯಕ್ತಿ. ಅಝೀಜ್ ಬದುಕಿದ್ದು ಕೇವಲ ಹದಿನೆಂಟು ವರ್ಷ. ಆದರೆ ಆ ಹದಿನೆಂಟು ವರ್ಷಗಳಲ್ಲಿ ಅವನು ಬದುಕಿದ ಬದುಕು ಅನೇಕರ ಅರವತ್ತು ವರ್ಷಗಳ ಬದುಕಿಗಿಂತಲೂ ಅರ್ಥಪೂರ್ಣವಾಗಿತ್ತು.
ಬಡತನ ಅವನ ಸಂಗಾತಿಯಾಗಿತ್ತು. ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದ. ಜೊತೆಗೆ ಸೋಜಿ ಶರ್ಬತ್ ಮಾರಾಟ ಮಾಡಿ ಮನೆಯ ಹೊರೆ ಹೊರುತ್ತಿದ್ದ. ದುಡಿಮೆ ಅವನಿಗೆ ಹೊರೆ ಆಗಿರಲಿಲ್ಲ; ಅದು ಅವನ ಹೆಮ್ಮೆ. ಎಷ್ಟೇ ಕಷ್ಟವಿದ್ದರೂ ಅವನ ಮುಖದಲ್ಲಿನ ನಗು ಎಂದಿಗೂ ಮಾಸಿರಲಿಲ್ಲ.ಊರಿನಲ್ಲಿ ಯಾರಿಗಾದರೂ ಸಹಾಯ ಬೇಕೆಂದರೆ ಮೊದಲು ನೆನಪಾಗುತ್ತಿದ್ದ ಹೆಸರು ಅಝೀಜ್. ಅವನು ಶ್ರೀಮಂತನಲ್ಲ, ಆದರೆ ಅವನ ಮನಸ್ಸು ಮಾತ್ರ ಅಪಾರ ಶ್ರೀಮಂತವಾಗಿತ್ತು. ಕೈಯಲ್ಲಿ ಹಣ ಕಡಿಮೆಯಿದ್ದರೂ, ಹೃದಯದಲ್ಲಿ ಪ್ರೀತಿ ತುಂಬಿಕೊಂಡಿದ್ದ.
ಅವನಿಗೆ ಸೈಕಲ್ ಎಂದರೆ ಜೀವ. ಊರಿನ ಮಂಚಿಯ ಮದಿಮಾಲ್ ಪಾದೆ ಮತ್ತು ನಗ್ರಿಯ ತಗ್ಗಿನ ಇಳಿಜಾರು ರಸ್ತೆಯಲ್ಲಿ ಅವನ ಸೈಕಲ್‌ನ ಹಿಂದಿನ ಸ್ಟ್ಯಾಂಡ್ ಮೇಲೆ ಕೂತು ಗಾಳಿಯ ವೇಗದಲ್ಲಿ ಇಳಿಯುವುದು ನಮ್ಮ ಬಾಲ್ಯದ ಮರೆಯಲಾಗದ ಸಂತೋಷ. ಆ ಕ್ಷಣಗಳಲ್ಲಿ ಭಯ ಎನ್ನುವುದು ನಮಗೆ ಗೊತ್ತೇ ಇರಲಿಲ್ಲ. ಗಾಳಿಯ ಸದ್ದಿನ ನಡುವೆ ಕೇಳಿಸುತ್ತಿದ್ದದ್ದು ಅವನ ನಗು ಮಾತ್ರ.
ನಾನು ಹೈಸ್ಕೂಲ್‌ನಲ್ಲಿ ಓದುತ್ತಿದ್ದ ದಿನಗಳಲ್ಲಿ, ಕೆಲವೊಮ್ಮೆ ಶಾಲೆ ಮುಗಿಯುವ ಹೊತ್ತಿಗೆ ಅವನು ಗೇಟ್ ಹೊರಗೆ ಸೈಕಲ್ ಹಿಡಿದು ಕಾಯುತ್ತಿರುತ್ತಿದ್ದ. ನನ್ನನ್ನು ಮನೆಗೆ ಕರೆದುಕೊಂಡು ಹೋಗುವುದೇ ಅವನಿಗೆ ಒಂದು ಖುಷಿ. ಓದಿನಲ್ಲಿ ಹೆಚ್ಚು ಅವಕಾಶ ಸಿಗದಿದ್ದರೂ, ಶಿಕ್ಷಣದ ಮೌಲ್ಯವನ್ನು ಅವನು ಚೆನ್ನಾಗಿ ಅರಿತಿದ್ದ. ಅದಕ್ಕಾಗಿ ಸಂಜೆ ವೇಳೆಗೆ ವಯಸ್ಕರ ಸಾಕ್ಷರತಾ ಶಾಲೆಗೆ ಹೋಗುತ್ತಿದ್ದ. "ನಾನು ಹೆಚ್ಚು ಕಲಿಯಬೇಕು" ಎನ್ನುವುದು ಅವನ ಕನಸಾಗಿತ್ತು.
ಆದರೆ ಅವನ ಬದುಕಿನ ನೆರಳಾಗಿ ಒಂದು ಕಾಯಿಲೆ ಸದಾ ಜೊತೆಗಿತ್ತು 'ಹಿಮೋಫಿಲಿಯಾ'. ಸಣ್ಣ ಗಾಯವಾದರೂ ರಕ್ತ ನಿಲ್ಲಲು ಕಷ್ಟ. ವೈದ್ಯರು ಒಮ್ಮೆ ಅವನ ಮನೆಯವರಿಗೆ ಹೇಳಿದ್ದರು:
"ಇವನು ಹದಿನೆಂಟು ವರ್ಷ ದಾಟಿ ಬದುಕಿದರೆ ಅದು ದೇವರ ದೊಡ್ಡ ಕೃಪೆ."
ಆ ಮಾತು ಮನೆಯವರನ್ನು ಬೆಚ್ಚಿಬೀಳಿಸಿತ್ತು. ಆದರೆ ಅಝೀಜ್ ಮಾತ್ರ ಆ ಭಯವನ್ನು ತನ್ನ ಬದುಕಿನ ಮೇಲೆ ಎಂದಿಗೂ ಆಳಲು ಬಿಡಲಿಲ್ಲ. ಹದಿನೆಂಟನೇ ವರ್ಷ ದಾಟಿದ ಮೇಲಂತೂ, "ಸಾವು ಯಾವಾಗ ಬರುತ್ತದೆ ಎಂಬುದನ್ನು ಯೋಚಿಸುತ್ತಾ ಬದುಕುವುದಕ್ಕಿಂತ, ಬದುಕಿರುವ ಪ್ರತಿದಿನವನ್ನು ಸಂತೋಷದಿಂದ ಬದುಕಬೇಕು," ಎನ್ನುವಂತೆ ಬದುಕುತ್ತಿದ್ದ.
ಆದರೆ ವಿಧಿಯ ನಿರ್ಧಾರ ಬೇರೆ ಆಗಿತ್ತು.
ಒಂದು ದಿನ ಎಂದಿನಂತೆ ಸೈಕಲ್ ಸವಾರಿ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದ. ಗಾಯವಾಗಿ ರಕ್ತ ಹರಿಯಿತು. ಚಿಕಿತ್ಸೆ ನೀಡಿದ ನಂತರ ಎರಡು ದಿನಗಳಲ್ಲಿ ಚೇತರಿಸಿಕೊಂಡಂತೆ ಕಂಡುಬಂತು. ಎಲ್ಲರೂ ಅಪಾಯ ತಪ್ಪಿದೆ ಎಂದುಕೊಂಡರು.ಆದರೆ ಕೆಲವು ದಿನಗಳಲ್ಲೇ ಅವನ ಆರೋಗ್ಯ ಮತ್ತೆ ಹದಗೆಟ್ಟಿತು. ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಪ್ರಯತ್ನಪಟ್ಟರೂ, ಹಿಮೋಫಿಲಿಯಾದ ಮುಂದೆ ಅವರ ಪ್ರಯತ್ನಗಳು ಸೋತವು. ಕೊನೆಗೆ, ಹದಿನೆಂಟು ವರ್ಷದ ಆ ನಗುವಿನ ಮುಖ ಶಾಶ್ವತವಾಗಿ ಕಣ್ಮರೆಯಾಯಿತು.
ಅವನ ಸಾವಿನ ಸುದ್ದಿ ಕೇಳಿದಾಗ ನನಗೆ ನಂಬಲೇ ಆಗಲಿಲ್ಲ. ನಿನ್ನೆ ನನ್ನ ಜೊತೆ ನಕ್ಕು ಮಾತನಾಡಿದ ಗೆಳೆಯ, ಇಂದು ಇಲ್ಲ ಎನ್ನುವುದನ್ನು ಮನಸ್ಸು ಒಪ್ಪಿಕೊಳ್ಳಲಿಲ್ಲ.ಅವನ ಮಯ್ಯತ್ ನೋಡಲು ಊರಿಗೆ ಊರೇ ಸೇರಿತ್ತು. ವೃದ್ಧರು, ಯುವಕರು, ಮಕ್ಕಳು, ಮಹಿಳೆಯರು, ಎಲ್ಲರ ಕಣ್ಣುಗಳಲ್ಲೂ ಕಣ್ಣೀರು ತುಂಬಿತ್ತು. ಅವನನ್ನು ಕಳೆದುಕೊಂಡದ್ದು ಕೇವಲ ಒಂದು ಕುಟುಂಬವಲ್ಲ; ಇಡೀ ಊರು ತನ್ನ ಮಗನನ್ನೇ ಕಳೆದುಕೊಂಡಂತಾಗಿತ್ತು.
ಇಂದಿಗೂ ಮಂಚಿಯ ಮದಿಮಾಲ್ ಪಾದೆಯ ಇಳಿಜಾರು ರಸ್ತೆ ಕಾಣಿಸಿದಾಗ, ಅಥವಾ ಹೈಸ್ಕೂಲ್ ಗೇಟ್ ಮುಂದೆ ಹಾದುಹೋದಾಗ, ಅಝೀಜ್‌ನ ನಗು, ಅವನ ಸೈಕಲ್ ಮತ್ತು ಅವನ ಸ್ನೇಹ ಕಣ್ಣಮುಂದೆ ಜೀವಂತವಾಗುತ್ತದೆ.
ಕೆಲವರು ಸತ್ತ ನಂತರ ಮರೆಯಾಗುತ್ತಾರೆ. ಆದರೆ ಕೆಲವರು ನೆನಪುಗಳಾಗಿ ಪ್ರತಿದಿನ ನಮ್ಮೊಂದಿಗೆ ನಡೆಯುತ್ತಾರೆ. ಅಝೀಜ್ ಅಂತಹವನು.
ಅವನು ಬದುಕಿದ್ದು ಕೇವಲ ಹದಿನೆಂಟು ವರ್ಷ.ಆದರೆ ನನ್ನ ನೆನಪುಗಳಲ್ಲಿ, ನನ್ನ ಹೃದಯದಲ್ಲಿ, ನಮ್ಮ ಊರಿನ ಪ್ರೀತಿಯಲ್ಲಿ ಅವನು ಎಂದೆಂದಿಗೂ ಜೀವಂತ. ಇಂದಿಗೂ ಯಾವಾಗಲಾದರೂ ಸೈಕಲ್ ಗಂಟೆಯ ಶಬ್ದ ಕೇಳಿದರೆ, ಆ ಇಳಿಜಾರು ರಸ್ತೆ ಕಂಡರೆ, ಅಥವಾ ಹೈಸ್ಕೂಲ್ ಗೇಟ್ ಮುಂದೆ ನಿಂತರೆ, ಅಝೀಜ್ ನೆನಪಾಗುತ್ತಾನೆ.
ಒಂದು ಸಂದೇಶ: ಹಿಮೋಫಿಲಿಯಾ ಸಾಂಕ್ರಾಮಿಕ ರೋಗವಲ್ಲ. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಸರಿಯಾದ ಚಿಕಿತ್ಸೆ, ಜಾಗರೂಕತೆ ಮತ್ತು ಕುಟುಂಬದ ಬೆಂಬಲ ಇದ್ದರೆ ಹಿಮೋಫಿಲಿಯಾ ಇರುವ ವ್ಯಕ್ತಿಯೂ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಜೀವನದಲ್ಲಿ ಯಶಸ್ವಿಯಾಗಬಹುದು. "ಹಿಮೋಫಿಲಿಯಾ ಜೀವನದ ಅಂತ್ಯವಲ್ಲ; ಅದು ಜೀವನವನ್ನು ಹೆಚ್ಚು ಜಾಗರೂಕತೆಯಿಂದ ಮತ್ತು ಧೈರ್ಯದಿಂದ ಬದುಕುವ ಒಂದು ಸವಾಲು."

0 ಕಾಮೆಂಟ್‌ಗಳು